ಬೆಂಗಳೂರು : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪರ್ಧಿಸುವ ವರುಣಾ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಸ್ಪರ್ಧೆ ಮಾಡುತ್ತಾರೆ ಎನ್ನಲಾದ ಶಿಕಾರಿಪುರ ಕ್ಷೇತ್ರದಲ್ಲಿ ಮ್ಯಾಚ್ ಫಿಕ್ಸಿಂಗ್ ಆಗಿದೆಯೇ ಎಂಬ ಚರ್ಚೆ ಶುರುವಾಗಿದೆ.
ಹೌದು, ವರುಣಾ ಹಾಗೂ ಶಿಕಾರಿಪುರದಲ್ಲಿ ಮ್ಯಾಚ್ ಫಿಕ್ಸಿಂಗ್ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕುಮಾರಸ್ವಾಮಿ ಅವರಿಗೆ ನಮ್ಮ ಪಕ್ಷದ ಬಗ್ಗೆ ತಿಳಿದಿದೆಯಾ? ಎಂದು ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿನ ಟಿಕೆಟ್ ಅಸಮಾಧಾನದ ಬಗ್ಗೆ ಮಾತನಾಡಿರುವ ಅವರು, ನಾವು ಎಲ್ಲರ ಜತೆ ಮಾತನಾಡುತ್ತಿದ್ದೇವೆ. ರಾಜಕಾರಣದಲ್ಲಿ ಆಸೆ ಸಹಜ. ಈ ಸಂದರ್ಭದಲ್ಲಿ ನಾವು ಎಲ್ಲರಿಗೂ ಅವಕಾಶ ನೀಡಲು ಸಾಧ್ಯವಿಲ್ಲ. ರಾಜಕೀಯ ಎಂದರೆ ಅಧಿಕಾರ ಹಂಚಿ ಸಹಕಾರ ನೀಡುವುದಾಗಿದೆ. ಹೀಗಾಗಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಧಿಕಾರವನ್ನು ಹಂಚಲಾಗುವುದು. ಈ ಕಾರಣಕ್ಕಾಗಿ ಎಲ್ಲರೂ ಸಮಾಧಾನವಾಗಿ ಇರಬೇಕು ಎಂದು ಕೇಳುತ್ತಿದ್ದೇವೆ ಎಂದಿದ್ದಾರೆ.
ಪಟ್ಟಿ ಬಿಡುಗಡೆಗೂ ಮೊದಲೇ ಭಿನ್ನಮತ
ತಮ್ಮ ಆಕ್ರೋಶ, ಅಭಿಪ್ರಾಯ ತಿಳಿಸುವುದರಲ್ಲಿ ತಪ್ಪೇನಿಲ್ಲ. ಐದಾರೂ ವರ್ಷಗಳಿಂದ ದುಡಿದಿರುತ್ತಾರೆ. ಬೇರೆ ಪಕ್ಷದಿಂದ ಬಂದವರಿಗೆ ಟಿಕೆಟ್ ಕೊಟ್ಟಾಗ ಅಸಮಾಧಾನ ಸಹಜ. ಬಿಜೆಪಿಯಲ್ಲಿ ಅಭ್ಯರ್ಥಿ ಪಟ್ಟಿ ಪ್ರಕಟವಾಗುವ ಮುನ್ನವೇ ಭಿನ್ನಮತವನ್ನು ನೀವು ಕಾಣುತ್ತಿದ್ದೀರಿ. ಬೆಳಗಾವಿ ಹಾಗೂ ಇತರೆ ಭಾಗಗಳಲ್ಲಿ ನೋಡುತ್ತಿದ್ದೀರಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಗನಿಗೆ ಟಿಕೆಟ್ ಕೊಡಿಸಲು ವಿ ಸೋಮಣ್ಣ ಸರ್ಕಸ್
ವಿಶ್ವನಾಥ್ ಕಾಂಗ್ರೆಸ್ ಸೇರ್ತಾರೆ
ನಮ್ಮ ಪಕ್ಷದಲ್ಲಿ ಗೆಲುವಿನ ಸಾಮರ್ಥ್ಯ ಬಹಳ ಮುಖ್ಯ. ಆ ದೃಷ್ಟಿಯಿಂದ ನಾವು ಕೆಲವು ತೀರ್ಮಾನ ಕೈಗೊಂಡಿರುತ್ತೇವೆ. ಬಿಜೆಪಿಯಲ್ಲೂ ಹಾಲಿ ಶಾಸಕರುಗಳಿದ್ದರು. ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ವಿಶ್ವನಾಥ್ ಅವರು ಸೋಮವಾರ ಕಾಂಗ್ರೆಸ್ ಸೇರುತ್ತಿದ್ದಾರೆ. ವಿಶ್ವನಾಥ್ ಅವರು ಮೊನ್ನೆಯಷ್ಟೇ ಪಶ್ಚಾತಾಪ ಸತ್ಯಾಗ್ರಹ ಮಾಡಿದ್ದಾರೆ. ನಾವು ಕೆಲವರನ್ನು ಸಮಾಧಾನ ಪಡಿಸುತ್ತಿದ್ದೇವೆ ಎಂದು ಡಿಕೆಶಿ ತಿಳಿಸಿದ್ದಾರೆ.
ಸಿ.ಟಿ ರವಿ ಅವರ ಟೀಕೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ಅವರು ಸೋನಿಯಾ ಗಾಂಧಿಗೆ ಪ್ರಧಾನಮಂತ್ರಿಯಾಗುವಂತೆ ಆಹ್ವಾನ ನೀಡಿದಾಗ ಸೋನಿಯಾ ಗಾಂಧಿ ಅವರು ಅದನ್ನು ತ್ಯಾಗ ಮಾಡಿದರು. ಈ ದೇಶಕ್ಕೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ಮಾಡಿರುವ ತ್ಯಾಗವನ್ನು ಸಿ.ಟಿ ರವಿ ಹಾಗೂ ಅವರ ಬಿಜೆಪಿ ನಾಯಕರು ಪಂಚಾಯ್ತಿ ಮಟ್ಟದಲ್ಲೂ ಮಾಡಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.