ಬೆಂಗಳೂರು : ಕಾಂಗ್ರೆಸ್ ಪಾಳಯದಲ್ಲಿ ಮುಂದಿನ ಸಿಎಂ ಯಾರು ಎಂಬ ಚರ್ಚೆ ಜೋರಾಗಿಯೇ ಸದ್ದು ಮಾಡುತ್ತಿರುವ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಚ್ಚರಿಯ ಹೇಳಿಕೆ ನೀಡಿದ್ದು, ಸಿಎಂ ರೇಸ್ ನಲ್ಲಿದ್ದ ಸಿದ್ದರಾಮಯ್ಯ ಹಾಗೂ ಹಲವು ನಾಯಕರು ಕಕ್ಕಾಬಿಕ್ಕಿಯಾಗಿದ್ದಾರೆ.
ಹೌದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಮುಖ್ಯಮಂತ್ರಿ ಆಗಲು ಬಯಸಿದರೆ ಸ್ವಾಗತಾರ್ಹ ಎಂದು ಡಿ.ಕೆ ಶಿವಕುಮಾರ್ ಬೆಂಗಳೂರಿನಲ್ಲಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ದೇಶದ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೇರಿರುವ ಜನಪ್ರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಬಯಸಿದರೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಲು ಸಿದ್ಧರಾಗಿದ್ದೇವೆ ಎಂದು ಕೆಪಿಸಿಸಿ ಹೇಳಿದ್ದಾರೆ.
ನನಗಿಂತಲೂ 20 ವರ್ಷ ಹಿರಿಯ ರಾಜಕಾರಣಿ
ಮಲ್ಲಿಕಾರ್ಜುನ ಖರ್ಗೆ ಅವರು, ರಾಜ್ಯದಲ್ಲಿ 1972 ರಿಂದ ಅವರು ಕಾಂಗ್ರೆಸ್ ನಲ್ಲಿ ಇದ್ದವರು. ನಾನು 1985 ರಲ್ಲಿ ಬಂದಿದ್ದೇನೆ. ಕಾಂಗ್ರೆಸ್ ನ ಅತ್ಯಂತ ಹಿರಿಯ ನಾಯಕ ಖರ್ಗೆ ಆಗಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಏರಿದ್ದಾರೆ. ಪಕ್ಷಕ್ಕೆ ಅವರ ಕೊಡುಗೆ ಜಾಸ್ತಿ ಇದೆ. ನನಗಿಂತಲೂ 20 ವರ್ಷಗಳ ಕಾಲ ಹಿರಿಯ ರಾಜಕಾರಣಿ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ‘ನಮ್ಮ ನಡೆ ನಿಮ್ಮ ಮನೆ ಕಡೆ’ ಪ್ರಚಾರಕ್ಕೆ ಅಭೂತಪೂರ್ವ ಬೆಂಬಲ
ಮಲ್ಲಿಕಾರ್ಜುನ ಖರ್ಗೆ ಅವರು ಶಾಸಕಾಂಗ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋದರು. ಹೀಗಾಗಿ ಪಕ್ಷನಿಷ್ಠ ಮಲ್ಲಿಕಾರ್ಜುನ ಖರ್ಗೆಯವರು ಬಯಸಿದ್ರೆ ನಾನು ನನ್ನ ಅವಕಾಶ ಬಿಟ್ಟು ಕೊಡುತ್ತೀನಿ. ಅವರ ಕೈಕೆಳಗೆ ಕೆಲಸ ಮಾಡಲು ಸಿದ್ದನಿದ್ದೇನೆ ಎಂದು ಡಿಕೆಶಿ ಹೇಳಿದ್ದಾರೆ.
ನಾನು, ಸಿದ್ದು ಹಿಂದೆ ಸರಿಯುತ್ತೇವೆ
ಮಲ್ಲಿಕಾರ್ಜುನ ಖರ್ಗೆ ಸಿಎಂ ಆದ್ರೆ ನಾನು ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಿಎಂ ರೇಸ್ ನಿಂದ ಹಿಂದೆ ಸರಿಯುವುದಾಗಿ ಖಾಸಗಿ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಚುನಾವಣೆ ಹೊತ್ತಿನಲ್ಲೇ ಡಿಕೆಶಿ ಈ ಹೇಳಿಕೆ ಸಿಎಂ ರೇಸ್ ನಲ್ಲಿದ್ದ ಹಲವು ಕಾಂಗ್ರೆಸ್ ನಾಯಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಸಿದ್ದರಾಮಯ್ಯ, ಡಾ.ಜಿ ಪರಮೇಶ್ವರ್, ಎಂ.ಬಿ ಪಾಟೀಲ್ ಸೇರಿದಂತೆ ಹಲವು ನಾಯಕರು ವಿಚಲಿತರಾಗಿದ್ದಾರೆ.