Thursday, January 23, 2025

ವೈಭವದಿಂದ ‘ಸಂಪನ್ನ’ಗೊಂಡ ನಂಜನಗೂಡು ‘ದೊಡ್ಡ ಜಾತ್ರೆ’

ಬೆಂಗಳೂರು : ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ಮೈಸುರು ಜಿಲ್ಲೆ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ‘ಗೌತಮ ಪಂಚ ಮಹಾರಥೋತ್ಸವ’ ಅದ್ಧೂರಿಯಾಗಿ ಜರುಗಿದೆ. ಸುಮಾರು 96 ಅಡಿ ಎತ್ತರದ 110 ಟನ್‌ ತೂಕದ ಬೃಹತ್‌ ಗೌತಮ ರಥದಲ್ಲಿ ನಂಜುಂಡೇಶ್ವರನನ್ನು ಕಣ್ತುಂಬಿಕೊಂಡ ಭಕ್ತರು ಪುನೀತರಾದರು.

ಹೌದು, ರಾಜ್ಯದ ‘ದೊಡ್ಡ ಜಾತ್ರೆ’ ಎಂದೇ ಪ್ರಖ್ಯಾತಿ ಹೊಂದಿರುವ ನಂಜನಗೂಡಿನ ರಥೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾಗಿದ್ದಾರೆ. ನಂಜುಂಡೇಶ್ವರ ಸೇರಿ ಆತನ ಪರಿವಾರದ ಪಂಚಮಹಾರಥೋತ್ಸವ ಇಂದು (ಭಾನುವಾರ) ಮುಂಜಾನೆ 6ರಿಂದ 6.40ರೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ವೈಭವದಿಂದ ನಡೆದಿದೆ.

ಮುಂಜಾನೆ ಸುಮಾರು 2 ಗಂಟೆಯಿಂದ ಜಾತ್ರೋತ್ಸವದ ಪೂಜಾ ಕೈಂಕರ್ಯಗಳು ಆರಂಭಗೊಂಡಿದ್ದವು. ವಿವಿಧ ಹೋಮ ಹವನಗಳು ನಡೆದವು. ಪಾರ್ವತಿ, ಗಣಪತಿ ಹಾಗೂ ಸುಬ್ರಹ್ಮಣ್ಯ ಮತ್ತು ಚಂಡೇಕೇಶ್ವರಿಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಮುಂಜಾನೆ ಶುಭ ಮೀನ ಲಗ್ನ 6 ಗಂಟೆಗೆ ರಥೋತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.

ಮಹಾರಥದಲ್ಲಿ ವಿರಾಜಮಾನನಾಗಿದ್ದ ಶ್ರೀಕಂಠೇಶ್ವರ ಸ್ವಾಮಿಯ ತೇರನ್ನು ಲಕ್ಷಾಂತರ ಭಕ್ತರು ದೇವಸ್ಥಾನದ ಸುತ್ತ ಎಳೆದು ಪುನೀತರಾದರು. ಶ್ರೀಕಂಠೇಶ್ವರನ ರಥಾರೋಹಣವಾಗುತ್ತಿದ್ದಂತೆ ತಾಯಿ ಪಾರ್ವತಿ, ಗಣಪತಿ, ಸುಬ್ರಮಣ್ಯ ಹಾಗೂ ಚಂಡಿಕೇಶ್ವರನ ರಥೋತ್ಸವ ಸಂಪ್ರದಾಯ ಬದ್ಧವಾಗಿ ನಡೆಯಿತು. 1.5 ಕಿಮೀ ಉದ್ದದ ರಥ ಬೀದಿಯಲ್ಲಿ ಒಂದು ಸುತ್ತು ಐದು ರಥಗಳನ್ನು ಎಳೆಯಲಾಯಿತು.

ಈ ಬಾರಿ ರಥೋತ್ಸವದಲ್ಲಿ ಸಂಚರಿಸುವ ಐದೂ ರಥಗಳಿಗೆ ಹೊಸ ಹಗ್ಗವನ್ನು ಅಳವಡಿಸಲಾಗಿತ್ತು. ಜಾತ್ರೆಯಲ್ಲಿ ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿತ್ತು.

ಒಟ್ನಲ್ಲಿ, ಇತಿಹಾಸ ಪ್ರಸಿದ್ಧ ದೊಡ್ಡ ಜಾತ್ರಾ ಮಹೋತ್ಸ ಈ ಬಾರಿ ವೈಭವದಿಂದ ಸಂಪನ್ನಗೊಂಡಿತು. ಜಾತ್ರೆಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿದ್ದರು.

RELATED ARTICLES

Related Articles

TRENDING ARTICLES