ಬೆಂಗಳೂರು : ಸಂಸದ ಡಿ.ಕೆ ಅವರು ಸಚಿವ ಮುನಿರತ್ನ ವಿವಾದಾತ್ಮಕವಾಗಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವನ್ನು ಬಿಡುಗಡೆ ಮಾಡಿ ವಾಗ್ದಾಳಿ ನಡೆಸಿದ್ದಾರೆ. ಡಿ.ಕೆ ಸುರೇಶ್ ಆರೋಪಕ್ಕೆ ಸಚಿವ ಮುನಿರತ್ನ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಡಿ.ಕೆ ಸುರೇಶ್ ಮೇಲೆ ನನಗೆ ಬಹಳ ಗೌರವವಿದೆ. ಏಳು ವರ್ಷಗಳ ಕಾಲ ಅವರ ಜತೆಯಲ್ಲಿ ಇದ್ದೆ. ಅವರ ಜತೆ ಇದ್ದಾಗ ಐದು ಭಾಷೆಯಲ್ಲಿ ಮಾತನಾಡಿಸಿದ್ದಾರೆ. ಆದರೆ, ಇಂದು ನನಗೆ ಸಂಬಂಧಪಟ್ಟಂತೆ ಕೆಲ ಪದ ಬಳಕೆ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾನು ಬಿಜೆಪಿಗೆ ಬಂದ ಬಳಿಕ ಡಿ.ಕೆ ಸುರೇಶ್ ನನ್ನ ವಿರುದ್ಧವೇ ಮಾತನಾಡುತ್ತಿದ್ದಾರೆ. ಅವರ ಪಕ್ಕದಲ್ಲಿ ಕೂತಾಗ ಅನೇಕ ಭಾಷೆಯಲ್ಲಿ ಮಾತಾಡಿದ ಸಾವಿರ ವೀಡಿಯೋ ಇದೆ ನನ್ನ ಬಳಿ ಇದೆ ಎಂದು ಸಚಿವ ಮುನಿರತ್ನ ಡಿ.ಕೆ ಸುರೇಶ್ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.
ನಾನು ಓದೋದು ಕನ್ನಡ, ಮಾತನಾಡುವುದೂ ಕನ್ನಡ
ಸಂಸದ ಡಿ.ಕೆ ಸುರೇಶ್ ಅವರು, ಐಯ್ಯಪ್ಪ ಟೆಂಪಲ್ ಬಳಿ ಮಲಯಾಳಂ ಭಾಷೆ, ಯಶವಂತಪುರದಲ್ಲಿ ಉರ್ದು ಭಾಷೆ, ತಮಿಳು ಸ್ಲಂನಲ್ಲಿ ತಮಿಳು ಭಾಷಣ ಮಾಡಿಸಿದ್ದಾರೆ. ಇಷ್ಟೆಲ್ಲಾ ಭಾಷೆ ಮಾತನಾಡಿದ್ರೂ ನಾನು ಓದೋದು ಕನ್ನಡ. ಮಾತನಾಡುವುದೂ ಕನ್ನಡ. ಬರೆಯೋದು ಕನ್ನಡ ಎಂದು ಹೇಳಿದ್ದಾರೆ.
ಡಿ.ಕೆ ಸುರೇಶ್ ಅವರಿಗೆ ಇಷ್ಟು ಕೆಳಮಟ್ಟದ ರಾಜಕಾರಣ ಶೋಭೆ ತರಲ್ಲ. ರಾಜಕಾರಣ ಮಾಡುವುದಿದ್ದರೆ ನೇರವಾಗಿ ಮಾಡಿ ಎಂದು ಮುನಿರತ್ನ ವಾಗ್ದಾಳಿ ನಡೆಸಿದ್ದಾರೆ.