Friday, May 17, 2024

ಇದೇ ಮೊದಲ ಬಾರಿ ಪತ್ರಕರ್ತರಿಗೆ ಅಂಚೆ ಮತದಾನ ಮಾಡಲು ಅವಕಾಶ

ಬೆಂಗಳೂರು: ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಕಾರ್ಯನಿರತ ಪತ್ರಕರ್ತರಿಗೆ ಅಂಚೆ ಮತದಾನ (ಪೋಸ್ಟಲ್ ವೋಟಿಂಗ್) ಮಾಡಲು ಚುನಾವಣಾ ಆಯೋಗ ಅವಕಾಶ ನೀಡಿದೆ.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘವು ಪತ್ರಕರ್ತರಿಗೆ ಅಂಚೆ ಮತದಾನ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿತ್ತು. ಇದನ್ನು ಪುರಸ್ಕರಿಸಿರುವ ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ಇಂಥದೊಂದು ಅವಕಾಶ ಕಲ್ಪಿಸಿದೆ.

ಇದರಿಂದಾಗಿ ನಾನಾ ಕಡೆಯಲ್ಲಿ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ‌ ಮಾಡುತ್ತಿದ್ದ ಕಾರ್ಯ ನಿರತ ಪತ್ರಕರ್ತರು ಮತದಾನ ವಂಚಿತರಾಗುವುದು ತಪ್ಪಿದಂತಾಗಿದೆ. ಕರ್ತವ್ಯ ನಿರತರಾಗಿದ್ದಲ್ಲಿಂದಲೇ (ಅಗತ್ಯವಿದ್ದವರು) ತಮ್ಮ ಮತವಿರುವ ಕ್ಷೇತ್ರದಲ್ಲಿ ಮತದಾನ ಮಾಡಲು ಅವಕಾಶ ದೊರೆತಿರುವುದು ಅನುಕೂಲವಾಗಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು, ಆನ್ ಲೈನ್ ವೋಟಿಂಗ್ ಅವಕಾಶ ಕೋರಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಕೆಯುಡಬ್ಲ್ಯೂಜೆ ಪತ್ರ ಬರೆದಿತ್ತು. ದೃಶ್ಯ ಮುದ್ರಣ, ರೇಡಿಯೋ ಮಾಧ್ಯಮಗಳ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುವ ಪತ್ರಕರ್ತರು ಪ್ರತಿ ಚುನಾವಣೆ ವೇಳೆಯಲ್ಲೂ ಮತದಾನದಿಂದ ವಂಚಿತರಾಗುತ್ತಿದ್ದಾರೆ ಎನ್ನುವ ವಿಷಯವನ್ನು ಗಮನಕ್ಕೆ ತಂದಿತ್ತು ಎಂದು ಹೇಳಿದ್ದಾರೆ.

ಆನ್ ಲೈನ್ ಮತದಾನಕ್ಕೆ ವ್ಯವಸ್ಥೆ

ಕಾರ್ಯದೊತ್ತಡದ ನಡುವೆ ತಮ್ಮ ಸ್ವಂತ ಕ್ಷೇತ್ರಗಳಿಗೆ ಹೋಗಿ ಮತದಾನ ಮಾಡಲು ಆಗುತ್ತಿಲ್ಲ. ಹೀಗಾಗಿ ಬಹುತೇಕ ಪತ್ರಕರ್ತರು ಮತದಾನದಿಂದ ದೂರವೇ ಉಳಿಯುತ್ತಿದ್ದಾರೆ. ಆದ್ದರಿಂದ ಅಗತ್ಯವಿರುವ ಪತ್ರಕರ್ತರಿಗೂ ಆನ್ ಲೈನ್ ಮೂಲಕ ಮತದಾನ ಮಾಡುವ ವ್ಯವಸ್ಥೆ ಮಾಡಿಕೊಡಬೇಕು ಎಂದು ಕೆಯುಡಬ್ಲ್ಯೂಜೆ ವಿನಂತಿಸಿಕೊಂಡಿತ್ತು ಎಂದು ತಿಳಿಸಿದ್ದಾರೆ.

ಪತ್ರಕರ್ತರ ಬೇಡಿಕೆ ಪರಿಗಣಿಸಿ ಪೋಸ್ಟಲ್ ವೋಟಿಂಗ್ ಅವಕಾಶ ಮಾಡಿಕೊಟ್ಟಿರುವ ಚುನಾವಣಾ ಆಯೋಗಕ್ಕೆ ಶಿವಾನಂದ ತಗಡೂರು ಧನ್ಯವಾದ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES