ಬೆಂಗಳೂರು : ಕಾಂಗ್ರೆಸ್ ನಾಯಕರು ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಿಮ್ಮ ನಾಯಕರು ಯಾರು ಎಂದು ಕಾಂಗ್ರೆಸ್ ನಾಯಕರಿಗೆ ನಾನು ಕೇಳುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ರಾಹುಲ್ ಗಾಂಧೀ ಸಮನಾಗೋಕೆ ಸಾಧ್ಯ ಆಗುತ್ತಾ? ಎಂದು ಯಡಿಯೂರಪ್ಪ ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ನಾಯಕರು ಪಕ್ಷ ಅಧಿಕಾರಕ್ಕೆ ಬರುವುದು ಪಕ್ಕಾ. ನಾವೇ ಮುಂದಿನ ಮುಖ್ಯಮಂತ್ರಿ ಎಂದು ಹಗಲುಗನಸು ಕಾಣುತ್ತಿದ್ದಾರೆ. ಆದರೆ, ಅವರು 70ರಿಂದ 80 ಸ್ಥಾನ ಗೆಲ್ಲುವುದಕ್ಕೆ ಆಗುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ತಿರುಕನ ಕನಸು ಕಾಣ್ತಿದ್ದಾರೆ
ನಾವು ಅಧಿಕಾರಕ್ಕೆ ಬಂದ್ರೆ ಮತ್ತೆ ಮುಸ್ಲಿಮರಿಗೆ ಮೀಸಲಾತಿ ಕೊಡ್ತೀನಿ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆಗೆ ಮಾಜಿ ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಸರ್ಕಾರ ಎಲ್ಲ ಸಮುದಾಯಕ್ಕೂ ಸಮಾನವಾದ ಮೀಸಲಾತಿಯನ್ನು ಕಲ್ಪಿಸಿದೆ. ಆದರೆ ಕಾಂಗ್ರೆಸ್ನವರು ನಾವು ಅಧಿಕಾರಕ್ಕೆ ಬರ್ತೀವಿ ಅಂತ ತಿರುಕನ ಕನಸು ಕಾಣ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ನಾಯಕರು ಮೂಗಿಗೆ ತುಪ್ಪ ಸವರುವ ಕೆಲಸ ಮಾಡ್ತಾರೆ. ಶಿವಕುಮಾರ್ ಇದರ ಬಗ್ಗೆ ಕನಸು ಕಾಣಬೇಡಿ. ತಮ್ಮ ಸ್ಥಾನ ವಿರೋಧ ಪಕ್ಷ, ಎಲ್ಲಿ ಕೂರಬೇಕು ಅನ್ನೋದನ್ನ ಶಿವಕುಮಾರ್ ತೀರ್ಮಾನ ಮಾಡಿಕೊಳ್ಳಲಿ ಎಂದು ಡಿಕೆಶಿಗೆ ಯಡಿಯೂರಪ್ಪ ಟಾಂಗ್ ಕೊಟ್ಟಿದ್ದಾರೆ.