Monday, December 23, 2024

ಪಂಚರತ್ನ ಯಾತ್ರೆ ಒಂದು ಸ್ವರ್ಣ ಮೈಲುಗಲ್ಲು : ಎಚ್.ಡಿ ಕುಮಾರಸ್ವಾಮಿ ಬಣ್ಣನೆ

ಬೆಂಗಳೂರು : ಪಂಚರತ್ನ ಯಾತ್ರೆ ನನ್ನ ರಾಜಕೀಯ ಬದುಕಿನ ಒಂದು ಸ್ವರ್ಣ ಮೈಲುಗಲ್ಲು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಣ್ಣಿಸಿದ್ದಾರೆ.

ದಾಖಲೆ ಬರೆದಿರುವ ಪಂಚರತ್ನ ರಥಯಾತ್ರೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ಇದು ನನ್ನ ಜೀವನದಲ್ಲಿ ಅಚ್ಚಳಿಯದೇ ಉಳಿದುಹೋಗುವ ಆವಿಸ್ಮರಣೀಯ ಮಹಾಯಾತ್ರೆ. ಮೈಸೂರಿನಲ್ಲಿ ನಡೆದ ಸಮಾರೋಪ ಸಮಾವೇಶವಂತೂ ನನ್ನ ರಾಜಕೀಯ ಬದುಕಿನ ಒಂದು ಸ್ವರ್ಣ ಮೈಲುಗಲ್ಲು ಎಂದು ಹೇಳಿದ್ದಾರೆ.

ಮುಖ್ಯವಾಗಿ ಮಾಜಿ ಪ್ರಧಾನಿ ಹಾಗೂ ನನ್ನ ತಂದೆಯವರಾದ ಎಚ್.ಡಿ ದೇವೇಗೌಡ ಅವರ ಸಾನ್ನಿಧ್ಯದಲ್ಲಿ ನಡೆದ ಈ ಐತಿಹಾಸಿಕ ಸಮಾವೇಶಕ್ಕೆ ಜನತೆ ತೋರಿದ ಪ್ರೀತಿ ವಿಶ್ವಾಸಕ್ಕೆ ನಾನು ಆಜೀವ ಪರ್ಯಂತ ಚಿರಋಣಿ ಆಗಿರುತ್ತೇನೆ ಎಂದು ತಿಳಿಸಿದ್ದಾರೆ.

ರಾಜ್ಯದ ದಶದಿಕ್ಕುಗಳಿಂದ ಸಾಗಿಬಂದ ಮಹಾಜನತೆಗೆ ನನ್ನ ಗೌರವಪೂರ್ವಕ ಪ್ರಣಾಮಗಳು. ಅವರ ಬೆಂಬಲ ಇಲ್ಲದೆ ಈ ಸಮಾವೇಶವೇ ಇಲ್ಲ. ಹಾಗೆಯೇ, ಜನತೆಯನ್ನು ಸುರಕ್ಷಿತವಾಗಿ ಕರೆತಂದು, ವಾಪಸ್ ಅವರ ಮನೆಗಳಿಗೆ ತಲುಪಿಸಿದ ಎಲ್ಲಾ ಚಾಲಕ ಬಂಧುಗಳಿಗೆ, ಒಂದು ಸಣ್ಣ ಕಹಿಘಟನೆ ಆಗದಂತೆ ರಕ್ಷಣೆ ನೀಡಿದ ಪೊಲೀಸ್, ಗೃಹರಕ್ಷಕ ದಳ ಸಿಬ್ಬಂದಿಗೆ ನನ್ನ ಧನ್ಯವಾದಗಳು ಎಂದಿದ್ದಾರೆ.

ಹೃದಯಪೂರ್ವಕ ಕೃತಜ್ಞತೆ

ಇಂತಹ ಅಭೂತಪೂರ್ವ ಸಮಾವೇಶದ ಯಶಸ್ಸಿಗೆ ಶ್ರಮಿಸಿದ ಜೆಡಿಎಸ್ ಪಕ್ಷದ ಎಲ್ಲಾ ಶಾಸಕರು, ಮುಖಂಡರು, ಕಾರ್ಯಕರ್ತರು ಸೇರಿ ಪ್ರತ್ಯಕ್ಷ, ಪರೋಕ್ಷವಾಗಿ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ಕೃತಜ್ಞತೆಗಳು ಸಲ್ಲುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕಳೆದ ನವಂಬರ್ 18ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದಿಂದ ಆರಂಭವಾದ ಪಂಚರತ್ನ ರಥಯಾತ್ರೆಯು, ರಾಜ್ಯದ 25 ಜಿಲ್ಲೆಗಳ 88 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ದಾಖಲೆ ಬರೆದಿದೆ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES