ಬೆಂಗಳೂರು : ರೆಬಲ್ ಸ್ಟಾರ್ ಅಂಬರೀಶ್ ಅಭಿಮಾನಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ದಿ.ರೆಬಲ್ ಸ್ಟಾರ್ ಅಂಬರೀಶ್ ಸ್ಮಾರಕ ಲೋಕಾರ್ಪನೆಗೊಳಿಸಿ ಮಾತನಾಡಿದ ಅವರು, ಈಗ ಸ್ಮಾರಕ ಪೂರ್ತಿಯಾಗಿದೆ. ಹಾಗಾಗಿ, ಅದನ್ನು ಉದ್ಘಾಟನೆ ಮಾಡಿದ್ದೇವೆ. ಮ್ಯೂಸಿಯಂ ಕೂಡ ಕೆಲವೇ ತಿಂಗಳಲ್ಲಿ ಪೂರ್ತಿಯಾಗಲಿದ್ದು, ನಾವೇ ಬಂದು ಅದನ್ನು ಉದ್ಘಾಟನೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಅಂಬಿ ಡಾಕ್ಟರ್ ಮಾತು ಕೇಳಲಿಲ್ಲ
ಅಂಬರೀಶ್ ಆಸ್ಪತ್ರೆ ಸೇರುವ 2 ದಿನ ಮುಂಚೆ ನಾವು ಭೇಟಿ ಮಾಡಿದ್ದೆವು. ಡಾಕ್ಟರ್ ಸಹ ಬಂದದ್ದರು. ಆದರೆ ಅಂಬರೀಶ್ ಡಾಕ್ಟರ್ ಮಾತು ಕೇಳಲಿಲ್ಲ. ಸಿಂಗಪೂರದಲ್ಲಿದ್ದಾಗಲೂ ಆತ ನನ್ನೊಂದಿಗೆ ಮಾತನಾಡಿದ್ದರು. ಆತ ಉತ್ಸಾಹಪೂರ್ವಕವಾಗಿ ಬದುಕಿದ್ದರು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಇಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಖ್ಯಾತ ಚಲನಚಿತ್ರ ನಟ ಹಾಗೂ ನನ್ನ ಆತ್ಮೀಯ ಮಿತ್ರರಾಗಿದ್ದ ರೆಬೆಲ್ ಸ್ಟಾರ್ ಅಂಬರೀಶ್ ಅವರ ಸ್ಮಾರಕವನ್ನು ಅನಾವರಣಗೊಳಿಸಿ, ಅಂಬಿ ಜೊತೆಗಿನ ನನ್ನ ಸ್ನೇಹದ ಹಾಗೂ ಅವರ ಅಜಾತಶತ್ರುವಿನ ಗುಣಗಳ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟೆನು. pic.twitter.com/bplQnqOI06
— Basavaraj S Bommai (@BSBommai) March 27, 2023
ಅಭಿಷೇಕ್ ಕೂಡ ಡಬಲ್ ರೆಬೆಲ್
ಸುಮಲತಾ ಅವರ ಸಂತೋಷದಲ್ಲಿ ನಾವೆಷ್ಟು ಪಾಲುದಾರರೋ ಅವರ ದುಃಖದಲ್ಲೂ ನಾವು ಇರುತ್ತೀವಿ. ಅಂಬರೀಶ್ ಪುತ್ರ ಅಭಿಷೇಕ್ ಕೂಡ ಡಬಲ್ ರೆಬೆಲ್ ಇದಾನೆ. ರಾಜ್ಯದ ಜನರು ಅವನಿಗೂ ಆಶೀರ್ವಾದ ಮಾಡಬೇಕು. ಅಂಬರೀಶ್ ಗೆ ಕೊಟ್ಟ ಪ್ರೀತಿಗಿಂತ ಡಬಲ್ ಪ್ರೀತಿಯನ್ನು ಅಭಿಷೇಕ್ ಗೆ ಕೊಡಿ ಎಂದು ಹೇಳಿದ್ದಾರೆ.
ಅಂಬಿ-ನಾನು 37 ವರ್ಷದ ಗೆಳೆಯರು
ನಾನು ಅಂಬರೀಶ್ ಸುಮಾರು 37 ವರ್ಷಗಳಿಂದ ಗೆಳೆಯರು. ಹಲವಾರು ಸಂದರ್ಭಗಳಲ್ಲಿ ಭೇಟಿ ಆಗದಿದ್ದರೂ ಕೂಡ ನಮ್ಮ ಪ್ರೀತಿ ವಿಶ್ವಾಸ ಹಾಗೇ ಇತ್ತು. ನಾನು ಚುನಾವಣೆಗೆ ನಿಂತ ಕ್ಷೇತ್ರದಲ್ಲಿ ಆತ ಗೊತ್ತಿಲ್ಲದೇ ವಿರೋಧ ಅಭ್ಯರ್ಥಿಯ ಪ್ರಚಾರಕ್ಕೆ ಬರುತ್ತಿದ್ದ. ಅಲ್ಲಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಎಂದು ಗೊತ್ತಾದ ಕೂಡಲೇ ನನ್ನ ಗೆಳೆಯನ ವಿರುದ್ಧ ನಾನು ಪ್ರಚಾರ ಮಾಡುವುದಿಲ್ಲ ಎಂದು ಅರ್ಧಕ್ಕೆ ವಾಪಸ್ ಹೋದರು. ಆತ ಜೀವಕ್ಕೆ ಜೀವ ಕೊಡುವ ಗೆಳೆಯ ಎಂದು ಸಿಎಂ ಬೊಮ್ಮಾಯಿ ತಮ್ಮ ಸ್ನೇಹವನ್ನು ನೆನೆಸಿಕೊಂಡಿದ್ದಾರೆ.