ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಹೆಸರಿಗೆ ಮಾತ್ರ ರೆಬಲ್, ಒರಟನಾದರೂ ಅಂಬರೀಶ್ ಹೃದಯದಿಂದ ಮೃದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ದಿವಂಗತ ರೆಬಲ್ ಸ್ಟಾರ್ ಅಂಬರೀಶ್ ಸ್ಮಾರಕ ಉದ್ಘಾಟನೆಗೊಳಿಸಿ ಮಾತನಾಡಿದ ಅವರು, ಅಂಬರೀಶ್ ನಮ್ಮನ್ನು ಅಗಲಿದ್ದರೂ ಅವರ ನೆನಪು ಸದಾ ಕಾಲ ನಮ್ಮಲ್ಲಿರುತ್ತದೆ. ಸಾವಿನ ನಂತರವೂ ಅಂಬರೀಶ್ ಬದುಕುತ್ತಿದ್ದಾರೆ. ಅವರ ಸವಿನೆನಪಿಗಾಗಿ ಸ್ಮಾರಕ ಹಾಗೂ ಮ್ಯೂಸಿಯಂ ಅನ್ನು ಸರ್ಕಾರ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ನನ್ನ ಅತ್ಯಂತ ಆತ್ಮೀಯ ಮಿತ್ರನ ಸ್ಮಾರಕಕ್ಕೆ ನಾನೇ ಅಡಿಗಲ್ಲು ಹಾಕಿ ನಾನೇ ಉದ್ಘಾಟನೆ ಮಾಡುತ್ತಿರುವುದು ನನ್ನ ಯೋಗಾಯೋಗ. ಸರಳ ಹೃದಯಿ ಮಾತಿನಲ್ಲಿ ಒರಟನಾದರೂ ಹೃದಯದಿಂದ ಮೃದು. ಆತ ಕೊಡುಗೈ ದಾನಿ. ಆತನ ಸ್ಮಾರಕವನ್ನು ಜನರು ಬಂದು ನೋಡಿ ಅಭಿಮಾನ ಪಡಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಅಂಬರೀಶ್ ವ್ಯಕ್ತಿತ್ವದಲ್ಲೇ ಶಕ್ತಿ ಇತ್ತು
ಅಂಬರೀಶ್ ಅಂದರೆ ಒಂದು ಶಕ್ತಿ. ಅವರ ವ್ಯಕ್ತಿತ್ವದಲ್ಲೇ ಆ ಶಕ್ತಿ ಇತ್ತು. ಅಂಬರೀಶ್ ಎಲ್ಲಿಯೇ ಹೋದರೂ ಸಂತೋಷ ಇರುತ್ತಿತ್ತು. ಗಂಭೀರ ಚರ್ಚೆ ಸಮಯದಲ್ಲೂ ಅಂಬರೀಶ್ ಬಂದರೆ ಸಮಸ್ಯೆಗೆ ಪರಿಹಾರ ಸಿಗುತ್ತೆ ಅನ್ನೋ ಸಂತೋಷ ಇರುತ್ತಿತ್ತು ಎಂದು ಸ್ಮರಿಸಿದ್ದಾರೆ.
ಸ್ಮಾರಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್, ಸಂಸದ ಸದಾನಂದ ಗೌಡ, ರಾಘವೇಂದ್ರ ರಾಜ್ ಕುಮಾರ್, ಸಚಿವ ಗೋಪಾಲಯ್ಯ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ ಹರೀಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.