ಬೆಂಗಳೂರು : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಕರಣ ಟೀಕೆ ಮಾಡುವ ಭರದಲ್ಲಿ ಪ್ರಶಾಂತ್ ಸಂಬರ್ಗಿ ಎಡವಟ್ಟು ಮಾಡಿಕೊಂಡಿದ್ದಾರೆ.
ಹೌದು, ರಾಹುಲ್ ಗಾಂಧಿಯವರನ್ನು ಟೀಕಿಸುವ ಭರದಲ್ಲಿ, ಬಿಗ್‌ಬಾಸ್ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರನ್ನು ಅವಮಾನ ಮಾಡಿದ್ದು, ಎಲ್ಲೆಡೆ ಆಕ್ರೋಶ ಭುಗಿಲೆದ್ದಿದೆ.
ದೇವೇಗೌಡ ಕಳ್ಳ ಅನ್ನೋದಕ್ಕೂ, ಗೌಡರು ಅನ್ನೋರೆಲ್ಲ ಕಳ್ಳರೇ ಯಾಕಿರ್ತಾರೆ ಅನ್ನೋದಕ್ಕೂ ವ್ಯತ್ಯಾಸ ಇದೆ. ಮೊದಲನೆಯದ್ದಕ್ಕೆ ದೇವೇಗೌಡರು ಕೇಸು ಹಾಕಬೇಕು. ಎರಡನೆಯದ್ದಕ್ಕೆ ಅವನ ಮಗನೋ, ಮೊಮ್ಮಗನೋ ಅಥವಾ ಯಾವ ಗೌಡನಾದರೂ ಕೇಸು ಹಾಕಬಹುದು. ಸುಮ್ಮೆ ಒಂದು ಉದಾಹರಣೆ ಕೊಟ್ಟೆ ಅಷ್ಟೇ ಎಂದು ಪ್ರಶಾಂತ್ ಸಂಬರ್ಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.
ತಪ್ಪು ಮಾಡಿ ಯೂಟರ್ನ್ ಹೊಡೆದ ಸಂಬರ್ಗಿ
ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಭುಗಿಲೆದ್ದ ಕೂಡಲೇ ಪ್ರಶಾಂತ್ ಸಂಬರ್ಗಿ ಉಲ್ಟಾ ಹೊಡೆದಿದ್ದಾರೆ. ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು ಕ್ಷಮೆಯಾಚಿಸಿದ್ದಾರೆ.
ಕಳ ಕಳಿಯ ಕ್ಷಮೆ ಇರಲಿ
‘ನನ್ನ ತಂದೆ ಸಮಾನರಾದ ಶ್ರೀ ದೇವೆಗೌಡ್ರ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ನಾನು ಒಂದು ಉದಾರಣೆಯಾಗಿ ದೇವೆ ಗೌಡ ಎಂದು ಹೆಸರನ್ನು ಬಳಸಿದೆ ಹೊರತು ಯಾವುದೇ ದುರುದ್ವೇಷ ವಿರಲಿಲ್ಲ. ಇದು ಯಾವುದೇ ರೀತಿಯಲ್ಲೂ ಅವರ ಗೌರವಕ್ಕೆ ಚ್ಯುತಿ ತರಲು ಬಳಸಲಿಲ್ಲ. ಇದರಿಂದ ಯಾರಿಗಾದರೂ ಅಸಮಾಧಾನವಾಗಿದ್ದರೆ ಕಳ ಕಳಿಯ ಕ್ಷಮೆ ಇರಲಿ’ ಎಂದು ಬರೆದುಕೊಂಡಿದ್ದಾರೆ.
ಸಂಬರ್ಗಿ ವಿರುದ್ಧ ದೂರು
ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಮತ್ತು ಕುಮಾರಸ್ವಾಮಿ ಹಾಗೂ ಅವರ ಕುಟುಂಬದ ವಿರುದ್ಧ ಪದೇ ಪದೆ ಕೆಟ್ಟದಾಗಿ ಪೋಸ್ಟ್ ಮಾಡುತ್ತಿರುವ ಪ್ರಶಾಂತ್ ಸಂಬರ್ಗಿ ವಿರುದ್ಧ, ಚುನಾವಣಾ ಆಯುಕ್ತರ ಮೂಲಕ ಸೈಬರ್ ಕ್ರೈಂ ಡಿಸಿಪಿ ಅವರಿಗೆ ದೂರು ಸಲ್ಲಿಸಲಾಗಿದೆ.
ಸಂಬರ್ಗಿಯ ಎಲ್ಲಾ ಸಾಮಾಜಿಕ ಜಾಲತಾಣದ ಖಾತೆಗಳನ್ನು ವಶಪಡಿಸಿಕೊಳ್ಳಬೇಕು ಮತ್ತು ಆತನ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ. ರಾಜ್ಯ ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ ರಂಗನಾಥ್ ಮತ್ತು ಜೆಡಿಎಸ್ ವಕ್ತಾರ ಗಂಗಾಧರ ಮೂರ್ತಿ ಹಾಗೂ ಮತ್ತಿತರರ ನೇತೃತ್ವದಲ್ಲಿ ದೂರು ನೀಡಲಾಗಿದೆ.