ಬೆಂಗಳೂರು : ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಫೈಟ್ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಭವಾನಿ ರೇವಣ್ಣ ಅವರ ಸ್ಪರ್ಧೆ ಅನಿವಾರ್ಯ ಇಲ್ಲ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ್ರು ಕೂಡಾ ಸಹಮತ ಸೂಚಿಸಿದ್ದಾರೆ ಎನ್ನಲಾಗಿದೆ. ಹಾಗಾಗಿಯೇ ಭವಾನಿ ರೇವಣ್ಣ ಅವರು ಬಹುತೇಕ ಕಣದಿಂದ ಹಿಂದೆ ಸರಿದಿದ್ದಾರೆ.
ಹೌದು. ಭವಾನಿ ರೇವಣ್ಣ ಹದಿನೈದು ದಿನಗಳಿಂದಲೂ ಹಾಸನ ಕ್ಷೇತ್ರದತ್ತ ತಲೆಹಾಕಿಲ್ಲ. ತನ್ನ ಟಿಕೆಟ್ ತಪ್ಪಿಸಿದ ಸ್ವರೂಪ್ ಕೂಡಾ ಟಿಕೆಟ್ ಮಿಸ್ ಮಾಡಿಸಲೇಬೇಕು ಅಂತಾ ಪತಿ ರೇವಣ್ಣ ಮೂಲಕ ಹೊಸ ದಾಳವನ್ನು ಉರುಳಿಸಿದ್ದಾರೆ.
ಒಕ್ಕಲಿಗ ಮತಗಳು ಮೂರು ಭಾಗ
ಮೂರನೇ ಅಭ್ಯರ್ಥಿ ಹೆಸರು ತಂದ್ರೆ, ಸ್ವರೂಪ್ ಕಾಂಗ್ರೆಸ್ ಕಡೆ ಮುಖ ಮಾಡ್ತಾರೆ ಅನ್ನೋ ತಂತ್ರಗಾರಿಕೆಯನ್ನು ಹೆಣೆದಿದ್ದಾರೆ. ಸ್ವರೂಪ್ ಕಾಂಗ್ರೆಸ್ ನಿಂದ ನಿಂತರೆ ಒಕ್ಕಲಿಗ ಮತಗಳು, ಪ್ರೀತಂಗೌಡ ಹಾಗೂ ರಾಜೇಗೌಡ್ರಿಗೆ ಸೇರಿ ಮೂರು ಭಾಗಗಳಾಗುತ್ತವೆ. ಮುಳ್ಳುಗೌಡ ಮತಗಳು ನಮಗೆ ಮಾತ್ರ ಬೀಳುತ್ತೆ. ಆಗ ಜೆಡಿಎಸ್ ಅಭ್ಯರ್ಥಿ ಗೆಲುವು ಸುಲಭವಾಗುತ್ತೆ ಅನ್ನೋ ಲೆಕ್ಕಾಚಾರ ರೇವಣ್ಣ ಅವರದ್ದಾಗಿದೆ.
ಸ್ವರೂಪ್ ಗೇ ಟಿಕೆಟ್ ಘೋಷಣೆ
ಆದರೆ, ರೇವಣ್ಣ ತಂತ್ರಕ್ಕೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಒಪ್ಪಿಗೆ ನೀಡುವ ಸಾಧ್ಯತೆ ಕಡಿಮೆ ಇದೆ. ಸ್ವರೂಪ್ ಅವರಿಗೇ ಟಿಕೆಟ್ ಘೋಷಣೆ ಮಾಡುವ ಹೆಚ್ಚಿನ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ. ಇನ್ನೆರಡು ದಿನದಲ್ಲಿ ಹಾಸನ ಟಿಕೆಟ್ ಸೇರಿ ಜೆಡಿಎಸ್ ನ ಎರಡನೇ ಪಟ್ಟಿ ಪ್ರಕಟವಾಗುವ ಮೂಲಕ ದಳಪತಿಗಳು ಹಾಸನ ಟಿಕೆಟ್ ಗೊಂದಲಕ್ಕೆ ಅಂತಿಮ ತೆರೆ ಎಳೆಯುತ್ತಾರೆ ಎನ್ನುವುದು ರಾಜಕೀಯ ವಲಯದ ನಯಾ ಕಬರ್.