ಬೆಂಗಳೂರು : ಟಿಪ್ಪು ಕಾಲಮಾನದಲ್ಲಿ ನಾನು ಇದ್ದಿದ್ದರೇ ಆಂಜನೇಯ ಮಂದಿರ ಮಸೀದಿ ಆಗಲು ಬಿಡುತ್ತಿರಲಿಲ್ಲ. ನಾನೇ ಉರಿಗೌಡ, ನಾನೇ ದೊಡ್ಡ ನಂಜೇಗೌಡನಂತೆ ಕತ್ತಿ ಹಿಡಿದು ಸಿಡಿದು ನಿಲ್ಲುತ್ತಿದ್ದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಚಿಕ್ಕಮಳೂರಿನ ಬಸವನಹಳ್ಳಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು. ಇತಿಹಾಸದಲ್ಲಿ ಮತಾಂಧನ ವಿರುದ್ಧ ಕತ್ತಿ ಎತ್ತಿದ ಅನ್ನಿಸಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.
ಸಿ.ಟಿ ರವಿ ಉರಿಗೌಡ, ಸಚಿವ ಅಶ್ವಥನಾರಾಯಣ ನಂಜೇಗೌಡ ಎಂಬಂತೆ ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಆಧಾರ್ ಕಾರ್ಡ್ ಹರಿಬಿಟ್ಟಿರುವುದನ್ನು ಸಮರ್ಥಿಸಿಕೊಂಡರು. ಹೌದು, ನಾವು ಅದೇ. ನಮಗೆ ಖುಷಿ, ಹೆಮ್ಮೆ ಇದೆ ಎಂದು ಸಿದ್ದರಾಮಯ್ಯ ಬೆಂಬಲಿಗರಿಗೆ ಟಾಂಗ್ ಕೊಟ್ಟಿದ್ದಾರೆ.
ಸತ್ಯವನ್ನು ಪ್ರತಿಪಾದನೆ ಮಾಡುತ್ತಿದ್ದೇವೆ
ಇವತ್ತು ಟಿಪ್ಪುಯಿದ್ದು, ಆತ ಆಂಜನೇಯ ದೇವಸ್ಥಾನವನ್ನು ಮಸೀದಿ ಮಾಡ ಹೊರಟಿದ್ದರೆ ಸುಮ್ಮನೆ ಇರ್ತಿದ್ವಾ, ಕೆಲವರಿಗೆ ಸತ್ಯ ಗೊತ್ತು. ಆದರೂ, ಹೇಡಿಗಳಂತೆ ಬದುಕುತ್ತಿದ್ದಾರೆ. ವೋಟಿನ ಆಸೆಗೆ ಒಪ್ಪಿಕೊಳ್ಳಲು ಅವರು ತಯಾರಿರಲಿಲ್ಲ, ನಾವು ಸತ್ಯವನ್ನು ಪ್ರತಿಪಾದನೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ದುರ್ದೈವ ಕೆಲವರು ಕಪಾಲೇಶ್ವರ ಬೆಟ್ಟವನ್ನೇ ಮತಾಂತರ ಮಾಡಲು ಹೊರಟಿದ್ದ ಜನ, ಇಂದು ದೊಡ್ಡ-ದೊಡ್ಡ ಮಾತುಗಳನ್ನ ಆಡುತ್ತಾರೆ. ಗುಲಾಮಿ ಮಾನಸಿಕತೆಯಲ್ಲಿ ಬದುಕುವ ಜನರಿಗಿಂತ ಹಾಗೆ ಕರೆಸಿಕೊಳ್ಳುವುದು ಒಳ್ಳೆಯದು ಎಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.