ಬೆಂಗಳೂರು : ಕಾಂಗ್ರೆಸ್ ಅಭ್ಯರ್ಥಿಗಳ ಟಿಕೆಟ್ ಘೋಷಣೆಗೆ ಕೌಂಟ್ ಡೌನ್ ಶುರುವಾಗಿದೆ. ನಾಳೆಯೇ ಫಸ್ಟ್ ಲಿಸ್ಟ್ ರಿಲೀಸ್ ಆಗಲಿದ್ದು, ಯುಗಾದಿ ಹಬ್ಬದ ಸಿಹಿ ಯಾರಿಗೆ? ಕಹಿ ಯಾರಿಗೆ? ಅನ್ನೊದು ಕುತೂಹಲ ಕೆರಳಿಸಿದೆ. ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ ಟಿಕೆಟ್ ಘೋಷಣೆ ಮಾಡಲು ಮುಂದಾಗಿದೆ. ರಾಜ್ಯ ಕಾಂಗ್ರೆಸ್ ನಾಯಕರ ಲಾಭಿಗೆ ಸೊಪ್ಪು ಹಾಕಿದ್ಯಾ? ಇಲ್ವಾ? ಅನ್ನೋದು ನಾಳೆ ರಿವೀಲ್ ಆಗಲಿದೆ.
ಹೌದು, ಯುಗಾದಿ ಹಬ್ಬದಂದೇ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಆಗಲಿದೆ. ಕೈ ಕಲಿಗಳ ಲಾಭಿ ನಡುವೆ ವರಿಷ್ಠರು 110-120 ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡಿದ್ದಾರೆ.
ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ಕನ್ಫರ್ಮ್ ಆಗಿದ್ದು, ಯಾರಿಗೆ ಶಾಕ್ ಹೊಡೆಯುತ್ತೋ ಗೊತ್ತಿಲ್ಲ. ವಿರೋಧ ಪಕ್ಷದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಡಾ.ಜಿ ಪರಮೇಶ್ವರ್, ಲಿಂಗಾಯತ ನಾಯಕರ ನಡುವೆ ಗುಂಪು ರಾಜಕಾರಣ ನಡೆಯುತ್ತಿದ್ದು, ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ತೀವ್ರ ಕಸರತ್ತು ನಡೆಸಿದ್ದಾರೆ.
ಇನ್ನೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ದೆಹಲಿಯಲ್ಲೇ ಬೀಡು ಬಿಟ್ಟಿದ್ದು ಕೆಲವರ ಕೆಂಗಣ್ಣು ನೆಟ್ಟಿದೆ. ಅಂತಿಮ ಕ್ಷಣದವೆಗೂ ಆಪರೇಶನ್ ನಡೆಯುವುದರಲ್ಲಿ ಡೌಟಿಲ್ಲ. ಹೀಗಾಗಿ ಕೆಲವರ ಹೆಸರು ಪಟ್ಟಿಯಿಂದ ಕಾಣೆಯಾಗಬಹುದು. ಕೆಲವರ ಹೆಸರು ಸೇರ್ಪಡೆಯಾಗಲೂ ಬಹುದು.
2 ಕ್ಷೇತ್ರಗಳಲ್ಲಿ ನಿಲ್ತಾರಾ ಸಿದ್ದರಾಮಯ್ಯ
ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ, ಎಂ.ಬಿ ಪಾಟೀಲ್, ಜಿ.ಪರಮೇಶ್ವರ್, ದಿನೇಶ್ ಗುಂಡೂರಾವ್, ರಾಮಲಿಂಗಾರೆಡ್ಡಿ ಸೇರಿದಂತೆ ಘಟಾನುಘಟಿಗಳಿಗೆ ಮೊದಲ ಲಿಸ್ಟ್ ನಲ್ಲೇ ಟಿಕೆಟ್ ಅಂತಿಮವಾಗಿದೆ. ಆದರೆ, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡ್ತಾರಾ? ವರುಣಾದಿಂದ ಕಣಕ್ಕಿಳಿತಾರಾ? ಅಥವಾ ಎರಡೂ ಕ್ಷೇತ್ರಗಳಲ್ಲಿ ನಿಲ್ತಾರಾ ಅನ್ನೋದಕ್ಕೆ ಉತ್ತರ ಸಿಕ್ಕಿಲ್ಲ.
ಭವ್ಯಾಗೆ ನಿರಾಸೆಯಾಗಲಿದೆ
ವೈಎಸ್ ವಿ ದತ್ತಾಗೆ ಕಡೂರು ಕ್ಷೇತ್ರದ ಟಿಕೆಟ್ ಸಿಗೋ ಸಾಧ್ಯತೆಗಳು ಹೆಚ್ಚಾಗಿದೆ. ರಾಜಾಜಿನಗರ ಟಿಕೆಟ್ ಪುಟ್ಟಣ್ಣಗೆ ಒಲಿಯೋ ಸಾಧ್ಯತೆ ಇದ್ದು, ಟಿಕೆಟ್ ಬಯಸಿದ್ದ ಭವ್ಯಾಗೆ ನಿರಾಸೆಯಾಗಲಿದೆ. ರಾಮನಗರದಲ್ಲಿ ಇಕ್ಬಾಲ್ ಹುಸೇನ್ ಗೆ ಕಾಂಗ್ರೆಸ್ ಟಿಕೆಟ್ ಸಿಗುವ ಸಾಧ್ಯತೆಯಿದೆ. ಕೋಟೆ ನಾಡಿನಿಂದ ವೀರೇಂದ್ರ ಪಪ್ಪಿ ಕಣಕ್ಕಿಳಿಯಬಹುದು. ಹೀಗೆ ಕೆಲವು ಕ್ಷೇತ್ರಗಳಿಗೆ ಅನ್ಯಪಕ್ಷದವ್ರನ್ನ ಆಯ್ಕೆ ಮಾಡಲಾಗುತ್ತಿದೆ.
ಅಲ್ಲದೇ ಕೆ.ಆರ್ ಪುರಂ, ಯಶವಂತಪುರ, ಕೆ.ಆರ್ ಪೇಟೆ, ಹಿರೇಕೆರೂರು ಸೇರಿದಂತೆ ಬಿಜೆಪಿ ವಲಸೆ ಶಾಸಕರು ಪ್ರತಿನಿಧಿಸೋ ಕ್ಷೇತ್ರಗಳಿಗೆ ಕೈ ಟಿಕೆಟ್ ಘೋಷಿಸೋ ಸಾಧ್ಯತೆಗಳು ಕಡಿಮೆ. ಆ ಮೂಲಕ ವಲಸೆ ನಾಯಕರಿಗೂ ಕಾಂಗ್ರೆಸ್ ಬಾಗಿಲು ತೆರೆದು, ಬರಮಾಡಿಕೊಳ್ಳಲು ಕೈ ಪಡೆ ಪ್ಲಾನ್ ಮಾಡಿಕೊಂಡಿದೆ. ಈ ಕ್ಷೇತ್ರಗಳಿಗೆ ಅಭ್ಯರ್ಥಿ ಯಾರು ಎನ್ನುವ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.