ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರತಿಪಕ್ಷಗಳು ಆಡಳಿತರೂಢ ಬಿಜೆಪಿ ಪಕ್ಷದ ಮೇಲೆ ಆರೋಪಗಳ ಸುರಿಮಳೆಗೈಯುತ್ತಿವೆ. ಕೇವಲ ಮಾತಿನ ಮೂಲಕ ಅಲ್ಲದೆ, ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಂಡು ಬಿಜೆಪಿ ನಾಯಕರನ್ನು ಟ್ರೋಲ್ ಮಾಡಲಾಗುತ್ತಿದೆ.
ಹೌದು, ಕಾಂಗ್ರೆಸ್ ಪಕ್ಷ ಮಾತ್ರವಲ್ಲದೆ ಎಎಪಿ ಪಕ್ಷ ಸಹ ಬಿಜೆಪಿ ಆಡಳಿತ ಹಾಗೂ ಬಿಜೆಪಿ ನಾಯಕರು ರಾಜ್ಯದ ಜನರಿಗೆ ಕೊಟ್ಟ ಭರವಸೆಗಳನ್ನು ವಿಭಿನ್ನವಾಗಿ ಟೀಕಿಸುತ್ತಿದ್ದಾರೆ.
ಬಿಜೆಪಿ ನಾಯಕರನ್ನು ಆಮ್ ಆದ್ಮಿ ಪಾರ್ಟಿ(ಎಎಪಿ ಬೆಂಗಳೂರು ಘಟಕ) ಟ್ರೋಲ್ ಮಾಡಿದ್ದು, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.
‘ಬುರುಡೆ, ಬುರುಡೆ’ ಹಾಡಿಗೆ ಫೋಟೋ ಎಡಿಟ್
ಕ್ರೇಜಿಸ್ಟಾರ್ ವಿ. ರವಿಚಂದ್ರನ್ ನಟನೆಯ ರಾಮಾಚಾರಿ ಸಿನಿಮಾದ ‘ಬುರುಡೆ, ಬುರುಡೆ’ ಹಾಡಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರ ಫೋಟೋ ಹಾಗೂ ವಿಡಿಯೋ ತುಣುಕುಗಳನ್ನು ಎಡಿಟ್ ಮಾಡಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹಂಚಿಕೊಂಡಿರುವ ಎಎಪಿ (ಎಎಪಿ ಬೆಂಗಳೂರು ಘಟಕ) ‘ಈ ಬುರುಡೆ ಬುರುಡೆ ಬಿಡತೈತೆ!’ ಎಂದು ತಲೆಬರಹ (ಕ್ಯಾಪ್ಷನ್) ನೀಡಿದೆ.