Thursday, January 23, 2025

ತಿಳಿಯಲೇ ಬೇಕು ಯುಗಾದಿ ಹಿಂದಿನ ಬದುಕಿನ ಸ್ವಾದ-ಸಾರ!

ಬೆಂಗಳೂರು : ಮತ್ತೆ ಯುಗಾದಿ ಬಂದಿದೆ. ಬೇವು-ಬೆಲ್ಲದ ಸ್ವಾದ ಹೊತ್ತು ತಂದಿದೆ. ಪ್ರಕೃತಿ ಮಡಿಲಲ್ಲಿ ಹೊಸ ಬದಲಾವಣೆ ಇದೆ. ಇನ್ನೇನು ಬೇಕು ಯುಗಾದಿ ಸಂಭ್ರಮಕ್ಕೆ!

ಹಿಂದೂ ಸಂಪ್ರದಾಯದಲ್ಲಿ ಯುಗಾದಿ ಹಬ್ಬಕ್ಕೆ ಬಹಳ ಮಹತ್ವವಿದೆ. ಇದು ಹಿಂದೂಗಳ ಹೊಸ ವರ್ಷವೇ ಆಗಿದೆ. ಯುಗಾದಿ ಹಬ್ಬದಂದು ಸವಿಯುವ ಬೇವು-ಬೆಲ್ಲ ನಮ್ಮ ಬದುಕಿನ ಹಲವು ಭಾವಗಳನ್ನು ಪ್ರತಿಬಿಂಬಿಸುತ್ತದೆ.

ಹೌದು, ಬೇವು-ಬೆಲ್ಲದಲ್ಲಿ ಬೆರೆಸುವ ಪದಾರ್ಥಗಳು ಬಗೆ ಬಗೆಯ ರುಚಿಯನ್ನು ಕೊಡುತ್ತದೆ. ಈ ರುಚಿಗಳು ನಮ್ಮ ಜೀವನದ ಆಗುಹೋಗುಗಳನ್ನು, ಬದಲಾವಣೆಯನ್ನು ಪ್ರತಿನಿಧಿಸುತ್ತವೆ ಎಂಬುದು ನಿಮಗೆ ತಿಳಿದಿದೆಯೇ? ಅದನ್ನು ತಿಳಿಯಲು ತಪ್ಪದೇ ಈ ಸುದ್ದಿ ಪೂರ್ತಿಯಾಗಿ ಓದಿ.

ಬೇವು ದುಃಖ ಸಂಕೇತ

ಬೇವು ಬದುಕಿನ ಕಹಿಯನ್ನು ಸೂಚಿಸುತ್ತದೆ. ನಮ್ಮ ಜೀವನವು ಯಾವಾಗಲೂ ಸಂತೋಷದ ಕ್ಷಣಗಳಿಂದ ತುಂಬಿರಲು ಸಾಧ್ಯವಿಲ್ಲ . ನಮ್ಮ  ಜೀವನದ ಸುತ್ತಲಿನ ಕಹಿಗಳನ್ನು ನಾವು ಒಪ್ಪಿಕೊಳ್ಳಬೇಕು. ಕಹಿಯೊಂದಿಗೆ ಸುಖ ಜೀವನನ್ನು ಅನುಭವಿಸಲು ನಾವು ಸಿದ್ದರಾಗಿರಬೇಕು ಅನ್ನೊದನ್ನು ಬೇವು ಸೂಚಿಸುತ್ತದೆ.

ಬೆಲ್ಲ ಸಿಹಿಯ ಸಂಕೇತ

ನಿಮ್ಮ ಜೀವನದಲ್ಲಿ ಏನೇ ಬಂದರೂ, ನಗು ಮುಖದಿಂದ ಎಲ್ಲವನ್ನೂ ಒಪ್ಪಿಕೊಂಡರೆ, ಸಮಸ್ಯೆಗಳು ಸುಲಭವಾಗಿ ಕಾಣುತ್ತವೆ. ಇದನ್ನೇ ಸಿಹಿಕಹಿಯ ಮಿಶ್ರಣದಲ್ಲಿರುವ ಬೆಲ್ಲ ಸೂಚಿಸುತ್ತದೆ.

ಮಾವು ಅಚ್ಚರಿಯ ಸಂಕೇತ

ಮಾವು  ಯುಗಾದಿ ಬೇವು ಬೆಲ್ಲದ ಕೊನೆಯ ಹಾಗು ಪ್ರಮುಖವಾದ ಪದಾರ್ಥ . ನಾವು ಎಲ್ಲಾ ರೀತಿಯ ಭಾವನಾತ್ಮಕ ಹಂತಗಳನ್ನು ದಾಟಿ ಹೋಗಬಹುದು, ಆದರೆ ಜೀವನದಲ್ಲಿ ಅಚ್ಚರಿ ಮೂಡಿಸುವ ಸಂಗತಿಗಳು ಇಲ್ಲದಿದ್ದರೆ, ಬದುಕು ಬೇಸರ ಹುಟ್ಟಿಸುತ್ತದೆ. ಮಾವಿನ ಕಾಯಿಯ ಈ ಹುಳಿ ಅಚ್ಚರಿಗಳನ್ನು ತಂದೊಡ್ಡುವ ಮೂಲಕ ನೀವು ಜೀವನದಲ್ಲಿ ಹೊಸತನವನ್ನು ಕಲಿಯಲು ಪ್ರೇರಣೆ ನೀಡುತ್ತದೆ. ಹಾಗಾಗಿ ಹೊಸತನಕ್ಕೆ ನಮ್ಮ ಜೀವನವನ್ನು ತೆರೆದುಕೊಳ್ಳುವುದಕ್ಕೆ ಸದಾ ಸಿದ್ದರಿರಬೇಕು.

ಮೆಣಸು ಕೋಪದ ಸಂಕೇತ

ಮನುಷ್ಯನಿಗೆ ಕೋಪ ಬರುವುದು ಸಹಜ. ಕೆಲವರು ಅದನ್ನು ನಿಯಂತ್ರಣ ಮಾಡಿಕೊಳ್ಳುತ್ತಾರೆ ಅದರೆ ಇನ್ನೂ ಕೆಲವರು ಆ ಭಾವನೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ. ಕೋಪವನ್ನು ಮೆಣಸಿನ ಹಾಗೆ ನುಂಗಿ ಹೊಸ ಜೀವನವನ್ನು ಆರಂಭಿಸಿದ್ರೆ ಜೀವನ ಎಂದೆಂದೂ ಸುಖಕರವಾಗಿರಲಿದೆ.

ಉಪ್ಪು ಭಯದ ಸಂಕೇತ

ಬೇವು ಬೆಲ್ಲದ ಇತರೆ ವಸ್ತುವಾದ  ಉಪ್ಪು ಭಯವನ್ನು ಸಂಕೇತಿಸುತ್ತದೆ.  ತಪ್ಪುಗಳನ್ನು  ಮಾಡ ಬಾರದು  ಅನ್ನೋ  ಭಯವೇ ನೀವು ಹೊಸ ಕೆಲಸವನ್ನು ಮಾಡದಂತೆಯೂ ತಡೆಯುತ್ತದೆ. ಜೀವನದಲ್ಲಿ ಭಯ ಇರಬೇಕು ಅನ್ನೋ ಹಿರಿಯರ ಮಾತನ್ನು ಜೀವನದಲ್ಲಿ ಹೇಗೆ ಬಳಸಿಕೊಳ್ಳಬೇಕು ಅನ್ನೋ ಅರಿವು ನಮಗಿರಬೇಕು.

ಹುಣಸೇಹಣ್ಣು ಅಸಮಾಧಾನದ ಸಂಕೇತ

ಹುಣಸೆಹಣ್ಣಿನ ಹುಳಿ ರುಚಿ ನಿಮ್ಮ ಜೀವನದಲ್ಲಿನ ಅಸಮಾಧಾನವನ್ನು ಸಂಕೇತಿಸುತ್ತದೆ. ಅದನ್ನು ಹೇಗೆ ನಿಯಂತ್ರಿಸಬೇಕೆಂದು ನಿಮಗೆ ತಿಳಿದಿದ್ದರೆ, ನಿಮ್ಮ ಜೀವನದಲ್ಲಿನ ಗುರಿಗಳನ್ನು ಸುಲಭವಾಗಿ ಸಾಧಿಸಬಹುದು.

ಒಟ್ನಲ್ಲಿ, ಪ್ರತಿಯೊಂದು ಹಬ್ಬವು ತನ್ನದೇ ಆದ ಮಹತ್ವವನ್ನು ಹೊಂದಿದೆ. ಈ ಹಬ್ಬಗಳ ಆಚರಣೆಯ ಹಿಂದಿರುವ ಕಾರಣ, ಉದ್ದೇಶ, ಪ್ರಾಮುಖ್ಯತೆ ತಿಳಿದುಕೊಳ್ಳುವುದು ಅಗತ್ಯ. ಜೊತೆಗೆ, ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಬದುಕು ಮತ್ತಷ್ಟು ಸುಂದರ.

  • ಲೀನಶ್ರೀ ಪೂಜಾರಿ, ಪವರ್ ಟಿವಿ

RELATED ARTICLES

Related Articles

TRENDING ARTICLES