ಬೆಂಗಳೂರು : ಬಿಸಿಲ ಬೇಗೆಯಲ್ಲಿ ಬೆಂದಿದ್ದ ಜನರಿಗೆ ಕಳೆದ 2 ದಿನಗಳಿಂದ ವರುಣಾರಾಯ ತಂಪನ್ನೆರೆಯುತ್ತಿದ್ದಾನೆ. ದೇಶದ ವಿವಿಧ ಪ್ರದೇಶಗಳಲ್ಲಿ ಮುಂದಿನ ಹತ್ತು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಬಾರಿ ಫೆಬ್ರವರಿಯಿಂದಲೇ ರಾಜ್ಯದಲ್ಲಿ ವಿಪರೀತ ಬಿಸಿಲ ಧಗೆ ಶುರುವಾಗಿತ್ತು. ಕಳೆದ 2 ತಿಂಗಳಿಂದ ಬಿಸಿಲ ಬೇಗೆಯಲ್ಲಿ ಬೆಂದು ಕಂಗಾಲಾಗಿದ್ದ ಜನರಿಗೆ ವರುಣಾ ದೇವ ತಂಪನ್ನೆರೆದಿದ್ದಾನೆ. ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಕಳೆದ 2 ದಿನಗಳಿಂದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯಾಗುತ್ತಿದ್ದು, ಬಿಸಿಲಿನಿಂದ ಕಂಗಾಲಾಗಿದ್ದ ಜನರು ಅಕಾಲಿಕ ಮಳೆಯಿಂದಾಗಿ ಕೊಂಚ ನಿರಾಳರಾಗಿದ್ದಾರೆ.
ಬೆಂಗಳೂರಿನಲ್ಲಿ ಮುಂದುವರಿಯಲಿದೆ ಮಳೆ
ಮುಂದಿನ 24 ಗಂಟೆಯಲ್ಲಿ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ರಾಜ್ಯ ರಾಜಧಾನಿಯಲ್ಲಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದೆ. ಬೆಂಗಳೂರಿನ ಮಹದೇವಪುರ ವಲಯದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದ್ದು, ವೈಟ್ ಫೀಲ್ಡ್, ವರ್ತೂರು, ಕಾಡುಗೋಡಿ, ಸರ್ಜಾಪುರ, ಮಾರತಳ್ಳಿ, ಕೆ ಆರ್ ಪುರ ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
10 ದಿನ ಭಾರೀ ಮಳೆ
ಕೇಂದ್ರ, ಉತ್ತರ ಹಾಗೂ ಪಶ್ಚಿಮ ಭಾರತದಲ್ಲಿ ಸುರಿಯುವ ಈ ಅಕಾಲಿಕ ಮಳೆಯಿಂದ ರೈತರಿಗೆ ಸಂಕಷ್ಟ ಎದುರಾಗಲಿದೆ. ರಾಜ್ಯದಲ್ಲಿ ಮಳೆಯ ಮುನ್ಸೂಚನೆ ಸಿಕ್ಕಿದ್ದು, ಕರಾವಳಿ ಹೊರತುಪಡಿಸಿ ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಎರಡು ದಿನ ಮಳೆಯಾಗಲಿದೆ.
ಬೆಂಗಳೂರು ನಗರದ ಸುತ್ತಮುತ್ತಲಿನ ಜಿಲ್ಲೆಗಳು, ಚಾಮರಾಜನಗರ, ಮೈಸೂರು, ತುಮಕೂರು, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆಯಿದೆ.