ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಫಿ ಬೆಳೆಗಾರರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಕಾಫಿ ಬೆಳೆಗಾರರ 10 ಎಚ್.ಪಿ ವರೆಗಿನ ಪಂಪ್ ಸೆಟ್ಗೆ ಉಚಿತ ವಿದ್ಯುತ್ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ.
ಮಡಿಕೇರಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಬಳಿಕ ಫಲಾನುಭವಿಗಳ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು. ಹಳೆ ಬಾಕಿ ಗಣನೆಗೆ ತೆಗೆದುಕೊಳ್ಳದೆ ಉಚಿತ ವಿದ್ಯುತ್ ಪೂರೈಸುವಂತೆ ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಮೌಖಿಕ ಆದೇಶ ನೀಡಿದ್ದಾರೆ.
ಶಾಲೆಗೆ ತೆರಳುವ ಹೆಣ್ಣುಮಕ್ಕಳಿಗಾಗಿ ಉಚಿತ ಬಸ್ ಪಾಸ್ ಒದಗಿಸಲಾಗುತ್ತಿದೆ. 8 ಲಕ್ಷ ವಿದ್ಯಾರ್ಥಿನಿಯರಿಗೆ ಇದರಿಂದ ಲಾಭವಾಗಿದೆ. ಸಾಮಾಜಿಕ ನ್ಯಾಯ ಹೆಚ್ಚಿಸಲು ಕ್ರಮಕೈಗೊಳ್ಳಲಾಗಿದೆ. ಹಾಗಾಗಿ ಜೇನು ಗೂಡಿಗೆ ಕೈ ಹಾಕುವ ಕೆಲಸಮಾಡಿದ್ದೇನೆ ಎಂದು ಹೇಳಿದ್ದಾರೆ.
ಬರೇ ಭಾಷಣದಲ್ಲಿ ಸಾಮಾಜಿಕ ನ್ಯಾಯ ಸಾಧ್ಯವಿಲ್ಲ. ಕೆಲವರನ್ನ ಕೆಲವು ಸಮಯ ಮೋಸ ಮಾಡಬಹುದು. ಆದರೆ, ಜನರನ್ನು ಎಲ್ಲಾ ಸಮಯದಲ್ಲಿ ಮೋಸ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ಗೆ ಅಧಿಕಾರವಿದ್ದಾಗ ಯಾಕೆ ಸೌಲಭ್ಯ ನೀಡಲಿಲ್ಲ. ಅದು ಗ್ಯಾರಂಟಿ ಕಾರ್ಡ್ ಅಲ್ಲ, ಅದು ಬೋಗಸ್ ಕಾರ್ಡ್ ಎಂದು ಸಿಎಂ ಬೊಮ್ಮಾಯಿ ಟೀಕೆ ಮಾಡಿದ್ದಾರೆ.