ಬೆಂಗಳೂರು : ಇತ್ತೀಚೆಗೆ ಮಂಗಳೂರಿನಲ್ಲಿ ಆಜಾನ್ ಬಗ್ಗೆ ಹೇಳಿಕೆ ನೀಡಿ ವಿವಾದ ಮೈ ಮೇಲೆ ಎಳೆದುಕೊಂಡಿದ್ದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಮತ್ತೆ ಆಜಾನ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಈಶ್ವರಪ್ಪ, ಆಜಾನ್ ಕೂಗುವುದರಿಂದ ವಿದ್ಯಾರ್ಥಿಗಳಿಗೆ ಎಷ್ಟು ತೊಂದರೆಯಾಗುತ್ತಿದೆ. ಇದು ಪೋಷಕರಿಗೆ ಗೊತ್ತು. ವಿದ್ಯಾರ್ಥಿಗಳಿಗೂ ಸಹ ಗೊತ್ತು ಎಂದು ಹೇಳಿದ್ದಾರೆ.
ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಆಜಾನ್ ನಿಂದ ಎಷ್ಟು ತೊಂದರೆಯಾಗಿದೆ. ಇರುವುದನ್ನು ಬಹಿರಂಗವಾಗಿ ಹೇಳುವುದಕ್ಕೆ ನಾನು ಹಿಂದೆ ಮುಂದೆ ನೋಡಲ್ಲ. ಆಜಾನ್ ಹೇಳಿಕೆ ಕುರಿತು ಎಷ್ಟೇ ವಿರೋಧ ಎದುರಾದ್ರೂ ನಾನು ಜನ ಸಾಮಾನ್ಯನ ನೋವನ್ನು ಹೇಳುವವನೇ ಎಂದು ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ಇಷ್ಟಾದ್ರೂ ಪ್ರತಿಭಟನೆ ಮಾಡುತ್ತಾರೆ
ಸುಪ್ರೀಂಕೋರ್ಟ್ ಬೇರೆಯವರಿಗೆ ತೊಂದರೆಯಾಗದಂತೆ ಆಜಾನ್ ಸೌಂಡ್ ಇಡಲು ತೀರ್ಪು ನಿಡಿದೆ. ರಾತ್ರಿ 10 ರಿಂದ ಬೆಳಗ್ಗೆ 6 ವರೆಗೆ ಸಂಪೂರ್ಣ ನಿಷೇಧ ಮಾಡಲಾಗಿದೆ. ಇಷ್ಟಾದ್ರೂ ಇವರು ಪ್ರತಿಭಟನೆ ಮಾಡುತ್ತಾರೆ ಅಂದ್ರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಏನಿದೆ ಅದನ್ನು ಬಾಯಿಬಿಟ್ಟು ಹೇಳ್ತೀನಿ
ನನ್ನ ವಿರುದ್ಧ ಯಾರು ಎಷ್ಟೇ ಪ್ರತಿಭಟನೆ ನಡೆಸಿದ್ರೂ ಎದುರಿಸಲು ಸಿದ್ಧ. ಈ ರೀತಿ ಪ್ರತಿಭಟನೆ ಮಾಡುವುದನ್ನು ನಾನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಜನಸಾಮಾನ್ಯರ ಮನಸ್ಸಿನಲ್ಲಿ ಏನಿದೆ ಅನ್ನೋದನ್ನು ಬಾಯಿಬಿಟ್ಟು ಹೇಳ್ತೀನಿ. ಬೇರೆಯವರಿಗೆ ಇದು ಸಾಧ್ಯವಾಗುವುದಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.