ನವದೆಹಲಿ : ಬ್ರಿಟನ್‌ನಲ್ಲಿ ಭಾರತದ ಪ್ರಜಾಪ್ರಭುತ್ವದ ಕುರಿತಂತೆ ನೀಡಿರುವ ಹೇಳಿಕೆಗೆ ರಾಹುಲ್ ಗಾಂಧಿ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ರಾಹುಲ್ ಕ್ಷಮೆಯಾಚನೆಗೆ ಒತ್ತಾಯಿಸುವವರು, ಪ್ರಧಾನಿ ನರೇಂದ್ರ ಮೋದಿ ತಮ್ಮ ಹೇಳಿಕೆ ಮೂಲಕ ವಿದೇಶಗಳಲ್ಲಿ ಭಾರತದ ಜನರನ್ನು ಅಪಮಾನಿಸಿರುವ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.
ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸುವ ಜನರಿಗೆ ನಾನು ಒಂದು ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ. ಮೋದಿಯವರು ಐದಾರು ದೇಶಗಳಿಗೆ ಭೇಟಿ ನೀಡಿ, ಅಲ್ಲಿ ನಮ್ಮ ದೇಶದ ಜನರನ್ನು ಅವಮಾನಿಸಿದ ಮತ್ತು ಭಾರತದಲ್ಲಿ ಹುಟ್ಟಿದ್ದು ಪಾಪ ಎಂದು ನೀಡಿರುವ ಹೇಳಿಕೆ ಬಗ್ಗೆ ನೀವು ಉತ್ತರಿಸಬೇಕು ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ‘ಪ್ರಧಾನಿ ಮೋದಿಯನ್ನು ಮುಗಿಸಿ’ ಎಂದ ಕಾಂಗ್ರೆಸ್ ನಾಯಕ
ಅಭಿವ್ಯಕ್ತಿ, ವಾಕ್ ಸ್ವಾತಂತ್ರ್ಯ ದುರ್ಬಲಗೊಳಿಸಲಾಗುತ್ತಿದೆ. ಸತ್ಯ ಮಾತನಾಡಿದರೆ ಜೈಲಿಗೆ ಹಾಕಲಾಗುತ್ತದೆ. ಇದು ಪ್ರಜಾಪ್ರಭುತ್ವವನ್ನು ಅಂತ್ಯಗೊಳಿಸುವ ಪ್ರಕ್ರಿಯೆಯಲ್ಲವೇ ಎಂದು ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.