ಬೆಂಗಳೂರು : ಇಡೀ ಒಕ್ಕಲಿಗ ಸಮುದಾಯಕ್ಕೆ ಮೋಸ ಮಾಡಲು ಬಿಜೆಪಿಯವರು ಷಡ್ಯಂತ್ರ ರೂಪಿಸಿದ್ದಾರೆ. ಒಕ್ಕಲಿಗರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿಯವರು ಮೊದಲಿಂದಲೂ ಇತಿಹಾಸ ತಿರುಚಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕುವೆಂಪು, ಬಸವಣ್ಣ, ನಾರಾಯಣ ಗುರು, ಅಂಬೇಡ್ಕರ್, ಬಾಲಗಂಗಾಧರ ಸ್ವಾಮಿಜಿ, ಶಿವಕುಮಾರ ಸ್ವಾಮೀಜಿ. ಹೀಗೆ ಯಾರನ್ನೂ ಬಿಡದೇ ಇತಿಹಾಸ ತಿರುಚುತ್ತಿದ್ದಾರೆ. ಈಗ ಉರಿಗೌಡ, ನಂಜೇಗೌಡರ ಹೆಸರು ತೆಗೆದುಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಆ ಬಗ್ಗೆ ನಾನು ಈಗ ಚರ್ಚೆ ಮಾಡಲ್ಲ
ಉರಿಗೌಡ, ನಂಜೇಗೌಡರ ಇತಿಹಾಸ ಎಲ್ಲಿದೆ? ಇವರ ಹೆಸರು ಸೃಷ್ಟಿಸಿ ಇಡೀ ಒಕ್ಕಲಿಗ ಸಮುದಾಯಕ್ಕೆ ಮೋಸ ಮಾಡಲು ಬಿಜೆಪಿಯವರು ಷಡ್ಯಂತ್ರ ರೂಪಿಸಿದ್ದಾರೆ. ಒಕ್ಕಲಿಗರಿಗೆ ಅವಮಾನ ಮಾಡುತ್ತಿದ್ದಾರೆ. ಶ್ರೀರಂಗಪಟ್ಟಣ, ಶೃಂಗೇರಿಯಲ್ಲಿ ಅನೇಕ ಇತಿಹಾಸಗಳಿವೆ. ಆ ಬಗ್ಗೆ ನಾನು ಈಗ ಚರ್ಚೆ ಮಾಡುವುದಿಲ್ಲ. ಮುಂದೆ ಹೇಳುತ್ತೇನೆ ಎಂದು ಡಿಕೆಶಿ ಹೇಳಿದ್ದಾರೆ.
ಇದನ್ನೂ ಓದಿ : ಒಕ್ಕಲಿಗ ಕುಲಕ್ಕೆ ಮಾಡಿದ ಘೋರ ಅವಮಾನ : ಎಚ್ಡಿಕೆ
ಡಿಜಿಪಿ ವಿರುದ್ಧ ಪ್ರಕರಣ ದಾಖಲಿಸಿ
ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಇತಿಹಾಸ ತಿರುಚಲು ಉರಿಗೌಡ, ನಂಜೇಗೌಡ ದ್ವಾರ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿರುವ ಡಿಜಿಪಿ ಪ್ರವೀಣ್ ಸೂದ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಡಿಜಿಪಿ ಬಿಜೆಪಿಯ ಬಾಲಬಡುಕ
ನಾನು ಡಿಜೆಪಿ ಪ್ರವೀಣ್ ಸೂದ್ ಒಳ್ಳೆಯವರು, ನಿಷ್ಪಕ್ಷಪಾತ ವ್ಯಕ್ತಿ ಅಂದುಕೊಂಡಿದ್ದೆ. ಆದರೆ, ಬಿಜೆಪಿಯ ಬಾಲಬಡುಕರಾಗಿ ಕೆಲಸ ಮಾಡುತ್ತಿದ್ದಾರೆ. ಆ ದ್ವಾರ ನಿರ್ಮಾಣಕ್ಕೆ ಇವರು ಹೇಗೆ ಅನುಮತಿ ಕೊಟ್ಟರು? ಎಂದು ಪ್ರಶ್ನಿಸಿದರು.
ಈ.. ಡಿಜಿಪಿ ನಾಲಾಯಕ್
ಬಿಜೆಪಿಯವರು ಜಾತಿ, ಜಾತಿ ಮಧ್ಯೆ ವಿಷಬೀಜ ಬಿತ್ತನೆ ಮಾಡಿ ಚುನಾವಣೆ ಸಮೀಪಿಸುವಾಗ ಜನರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಇವರ ಹೆಸರಲ್ಲಿ ದ್ವಾರ ಮಾಡುವಂತೆ ಯಾರು ಕೇಳಿದ್ದರು? ಇವರು ಇದ್ದರು ಎಂಬುದಕ್ಕೆ ಎಲ್ಲಾದರೂ ದಾಖಲೆಗಳಿವೆಯೇ? ಈ ಡಿಜಿಪಿ ನಾಲಾಯಕ್. ಅವರು ಸರ್ಕಾರದ ಮಾತು ಕೇಳಿಕೊಂಡು ಇದಕ್ಕೆ ಅವಕಾಶ ನೀಡಿದ್ದಾರೆ.
ಕೂಡಲೇ ಡಿಜಿಪಿ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು. ಚುನಾವಣಾ ಆಯೋಗ ಕೂಡ ಅವರನ್ನು ಬೇರೆಡೆಗೆ ವರ್ಗಾಯಿಸಬೇಕು. ಅವರು ಆ ಹುದ್ದೆಗೆ ಬಂದು ಮೂರು ವರ್ಷವಾಯ್ತು. ಇನ್ನೂ ಯಾಕೆ ಅಲ್ಲಿಟ್ಟಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.