Wednesday, January 22, 2025

ಶಾಕಿಂಗ್ ನ್ಯೂಸ್ : ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ‘ಕಿಲ್ಲರ್ ಹೈವೇ’!

ಬೆಂಗಳೂರು : ನೂತನವಾಗಿ ನಿರ್ಮಾಣವಾಗಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ದಶಪಥ ಹೆದ್ದಾರಿಗೆ ಕಾಂಗ್ರೆಸ್ ‘ಕಿಲ್ಲರ್ ಹೈವೇ’ ಎಂದು ಹೆಸರಿಸಿದೆ.

ಹೆದ್ದಾರಿಯಲ್ಲಿ ನಡೆದ ಅಪಘಾತಗಳ ವಿವರ ಮುಂದಿಟ್ಟುಕೊಂಡು, ಹೆದ್ದಾರಿ ಕಾಮಗಾರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ. ಹೆದ್ದಾರಿಯಲ್ಲಿ ಈಯವರೆಗೆ 300 ಅಪಘಾತಗಳು ಸಂಭವಿಸಿವೆ. ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣವಾಗಿದೆ. 2 ಲಕ್ಷ ಜನರಿಗೆ ಈ ರಸ್ತೆಯಿಂದ ಅನಾನುಕೂಲ ಆಗುತ್ತಿದೆ ಎಂದು ಹೇಳಿದೆ.

ಈ ಸಂಬಂಧ ಮೈಸೂರಿನಲ್ಲಿ ಮಾತನಾಡಿರುವ ಕೆಪಿಸಿಸಿ ವಕ್ತಾರ ಎಂ‌ ಲಕ್ಷ್ಮಣ್ ಅವರು, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಬಗ್ಗೆ ಮಾಹಿತಿ ನೀಡಿದ್ದಾರೆ.

55 ಕಿಲೋಮೀಟರ್​​ಗೆ 155 ರೂ ಟೋಲ್ ನಿಗದಿಯಾಗಿದೆ. ಮತ್ತುಳಿದ 55 ಕಿಲೋಮೀಟರ್​ಗೆ 155 ರೂ. ನಿಗದಿಪಡಿಸಲಾಗಿದೆ. ಅಲ್ಲಿಗೆ ಒಟ್ಟು 300 ರೂ. ಟೋಲ್ ಪಾವತಿಸಬೇಕು. ಒಂದು ದಿವಸಕ್ಕೆ 5 ಕೋಟಿ ರೂ. ಸಂಗ್ರಹವಾಗಲಿದೆ. ಅಲ್ಲಿಗೆ ವರ್ಷಕ್ಕೆ 2,444 ಕೋಟಿ ರೂ. ಸಂಗ್ರಹವಾದಂತಾಗಲಿದೆ.

8 ಸಾವಿರ ಕೋಟಿ ಹೆಚ್ಚುವರಿ ಟೋಲ್

10 ವರ್ಷ ಟೋಲ್ ಸಂಗ್ರಹಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಲ್ಲಿಗೆ 10 ವರ್ಷದಲ್ಲಿ 20,440 ಕೋಟಿ ರೂ. ಸಂಗ್ರಹವಾಗಲಿದೆ. ರಸ್ತೆ ಮಾಡಲು 12 ಸಾವಿರ ಕೋಟಿ ರೂ. ವೆಚ್ಚವಾಗಿದೆ. ಅಲ್ಲಿಗೆ 8 ಸಾವಿರ ಕೋಟಿ ರೂ. ಹೆಚ್ಚುವರಿಯಾಗಿ ಟೋಲ್ ವಸೂಲಿಯಾದಂತಾಗಲಿದೆ. ಇದರಲ್ಲಿ ನಿಮಗೆ ಎಷ್ಟು ಕಮಿಷನ್ ಬಂದಿದೆ ಎಂದು ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಪ್ರತಾಪ್ ಸಿಂಹ ಪ್ರತಿಕ್ರಿಯೆ

ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ಅಪಘಾತಗಳ ಕುರಿತಾದ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ, ಚಾಲಕರ ನಿರ್ಲಕ್ಷ್ಯದಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಅಪಘಾತಗಳು ಸಂಭವಿಸುತ್ತಿವೆ ಎಂದು ಹೇಳಿದ್ದಾರೆ. ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿಲ್ಲ. ಸಮರ್ಪಕವಾಗಿಯೇ ನಿರ್ಮಾಣ ಮಾಡಲಾಗಿದೆ. ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು ಎಂದು ಹೇಳಿದ್ದಾರೆ.

ನಾಳೆ ಮೋದಿಯಿಂದ ಲೋಕಾರ್ಪಣೆ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಲೋಕಾರ್ಪಣೆಗೊಳಿಸಲಿದ್ದಾರೆ. ಲೋಕಾರ್ಪಣೆ ದಿನ ಸಮೀಪಿಸುತ್ತಿದ್ದಂತೆಯೇ ಒಂದೆಡೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಕ್ರೆಡಿಟ್ ವಾರ್ ನಡೆಯುತ್ತಿದ್ದರೆ ರಸ್ತೆ ನಿರ್ಮಾಣದ ಬಗ್ಗೆ ಆರೋಪಗಳೂ ಕೇಳಿಬಂದಿವೆ. ಅವೈಜ್ಞಾನಿಕವಾಗಿ ಹೆದ್ದಾರಿ ನಿರ್ಮಾಣ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ.

RELATED ARTICLES

Related Articles

TRENDING ARTICLES