ಬೆಂಗಳೂರು : ಇಂದಿನಿಂದ ರಾಜ್ಯಾದ್ಯಂತ ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಿದ್ದು, ವಿದ್ಯಾರ್ಥಿಗಳು ಆತ್ಮವಿಸ್ವಾಸದಿಂದಲೇ ಪರೀಕ್ಷೆ ಬರೆಯುತ್ತಿದ್ದಾರೆ. ಆದರೆ, ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿರುವ ಘಟನೆ ಮುಜುಗರಕ್ಕೆ ಕಾರಣವಾಗಿದೆ.
ಹೌದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ. ಹಿಜಾಬ್ ಧರಿಸಿ ಪರೀಕ್ಷಾ ಕೇಂದ್ರದೊಳಗೆ ಹೋಗುವಂತಿಲ್ಲ ಎಂದು ರಾಜ್ಯ ಸರ್ಕಾರದ ಕಠಿಣ ನಿಯಮ (ಆದೇಶ) ಹೊರಡಿಸಿದೆ. ಈ ನಡುವೆಯೂ ಇಂದು ಹಿಜಾಬ್ ಹಾಕಿಕೊಂಡು ವಿದ್ಯಾರ್ಥಿನಿಯರು ದ್ವಿತೀಯ ಪರೀಕ್ಷೆ ಬರೆಯಲು ಬಂದಿದ್ದ ಘಟನೆ ನಡೆದಿದೆ.
ಬೆಂಗಳೂರಿನ ಮಲ್ಲೇಶ್ವರದ ಕಾಲೇಜ್ ಒಂದರಲ್ಲಿ ವಿದ್ಯಾರ್ಥಿನಿ ಈ ರೀತಿ ಹಿಜಾಬ್ ಧರಿಸಿ ಬಂದಿದ್ದಾರೆ. ಅದನ್ನು ಗಮನಿಸಿ ಪ್ರಾಂಶುಪಾಲರು ಪರೀಕ್ಷಾ ಕೊಠಡಿಗೆ ಅನುಮತಿ ನಿರಾಕರಿಸಿದ್ದಾರೆ. ಬಳಿಕ ಹಿಜಾಬ್ ತೆಗೆಸಿ ಪರೀಕ್ಷಾ ಕೊಠಡಿಗೆ ಪ್ರವೇಶಿಸುವುದಕ್ಕೆ ಅವಕಾಶ ನೀಡಲಾಗಿದೆ ಎಂದು ವರದಿಯಾಗಿದೆ.
7,26 ,195 ವಿದ್ಯಾರ್ಥಿಗಳು
ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಒಟ್ಟು 7,26 ,195 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಕಲಾ ವಿಭಾಗದಲ್ಲಿ 2,34,815, ವಾಣಿಜ್ಯ ವಿಭಾಗದಲ್ಲಿ 2,47,260, ವಿಜ್ಞಾನ ವಿಭಾಗದಲ್ಲಿ 2,44,120 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ. 3,63,698 ಬಾಲಕರು ಮತ್ತು 3,62.497 ಬಾಲಕಿಯರು ಸೇರಿ ಒಟ್ಟಾರೆ 7,26,195 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.
1,109 ಪರೀಕ್ಷ ಕೇಂದ್ರಗಳು
ಪಿಯುಸಿ ಪರೀಕ್ಷೆಗಳು ಸುಗಮವಾಗಿ ನಡೆಯಲು ಶಿಕ್ಷಣ ಇಲಾಖೆ ಅಗತ್ಯವಿರುವ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. 1,109 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು ಈ ಹಿಂದೆ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದ್ದವರ ಮೇಲೆ ನಿಗಾವಹಿಸಲಾಗಿದೆ. ಪರೀಕ್ಷಾ ಕೇಂದ್ರಗಳು, ಭದ್ರತಾ ಕೊಠಡಿಗಳು, ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಮಂಡಳಿಯ ಕೇಂದ್ರ ಕಚೇರಿಯ ಮೇಲೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಭದ್ರತೆಗೂ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
5,716 ಕಾಲೇಜುಗಳ 1,109 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. 1,109 ಸಹ ಮುಖ್ಯ ಅಧೀಕ್ಷಕರು, 64 ಜಿಲ್ಲಾ ಜಾಗೃತ ದಳ, 525 ತಾಲ್ಲೂಕು ಜಾಗೃತ ದಳ ಮತ್ತು 2,373 ವಿಶೇಷ ಜಾಗೃತ ದಳ ಸಿಬ್ಬಂದಿಯ ನಿಯೋಜನೆ ಮಾಡಲಾಗಿದೆ.