ಬೆಂಗಳೂರು : ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಪುತ್ರ ಪ್ರಶಾಂತ್ ಮಾಡಾಳ್ ಲಂಚ ಪ್ರಕರಣದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಒಂದೇ ದಿನದಲ್ಲಿ ಮಧ್ಯಂತರ ಜಾಮೀನು ಸಿಕ್ಕಿರುವುದಕ್ಕೆ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಲೋಕಾಯುಕ್ತ ದಾಳಿ ಸಂದರ್ಭದಲ್ಲಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಕಚೇರಿ ಹಾಗೂ ಮನೆಯಲ್ಲಿ 8 ಕೋಟಿ ಹಣ ಸಿಕ್ಕಿದೆ. ಈ ಪ್ರಕರಣದಲ್ಲಿ ಶಾಸಕರಿಗೆ ಒಂದೇ ದಿನದಲ್ಲಿ ಜಾಮೀನು ಸಿಕ್ಕಿರುವುದು ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ.
ಪೊಲೀಸ್ ಇಲಾಖೆ ಎಷ್ಟು ನಿಷ್ಕ್ರಿಯ
ನಾನು ಮನೆಯಲ್ಲೇ ಇದ್ದೆ ಎಲ್ಲೂ ಹೋಗಿಲ್ಲ ಎಂದು ಶಾಸಕರು ಹೇಳಿದ್ದು, ಸರ್ಕಾರ ಹಾಗೂ ಪೊಲೀಸ್ ಇಲಾಖೆ ಎಷ್ಟು ನಿಷ್ಕ್ರಿಯವಾಗಿದೆ ಎಂಬುದಕ್ಕೆ ಇದು ಸಾಕ್ಷಿ. ಇವರು ಪೊಲೀಸ್ ಇಲಾಖೆ ನಿಷ್ಕ್ರಿಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ವಕೀಲರ ಸಂಘದವರು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಚಂದ್ರಚೂಡ ಅವರಿಗೆ ಪತ್ರ ಬರೆದು ಈ ರೀತಿ ಒಂದೇ ದಿನದಲ್ಲಿ ಜಾಮೀನು ನೀಡಿರುವುದು ಆತಂಕಕಾರಿ ವಿಚಾರ. ಇದರಿಂದ ಜನಸಾಮಾನ್ಯರು ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.
ಒಂದೇ ದಿನದಲ್ಲಿ ಜಾಮೀನು ಹೇಗೆ ಸಾಧ್ಯ?
ಸರ್ಕಾರ ಹಾಗೂ ಸರ್ಕಾರಿ ವಕೀಲರ ಬೆಂಬಲ ಇಲ್ಲವಾದರೆ ಕೇವಲ ಒಂದೇ ದಿನದಲ್ಲಿ ಜಾಮೀನು ಸಿಗಲು ಹೇಗೆ ಸಾಧ್ಯ? ಅದೇ ಬೇರೆ ಪಕ್ಷದವರಿಗೆ ಇಂತಹ ಪರ್ಕರಣದಲ್ಲಿ 2-3 ತಿಂಗಳಾದರೂ ಜಾಮೀನು ಸಿಗುವುದಿಲ್ಲ. ಸರ್ಕಾರ ಪರ ವಕೀಲರು ಜಾಮೀನು ನೀಡಲೇಬಾರದು ಎಂದು ವಾದ ಕೂಡ ಮಾಡುತ್ತಾರೆ. ಆದರೆ ಇಲ್ಲಿ ಒಂದೇ ದಿನಕ್ಕೆ ಜಾಮೀನು ಕೊಡಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಮತ್ತೊಂದು ಮುಖವಾಡ ಕಳಚಿದೆ. ಕಳೆದ ನಾಲ್ಕು ವರ್ಷಗಳಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ಭ್ರಷ್ಟಾಚಾರಗಳು ಬೆಳಕಿಗೆ ಬಂದಿದ್ದು, ಪಿಎಸ್ಐ ಹಗರಣ, ಸಹಾಯಕ ಪ್ರಾಧ್ಯಪಕರು, ಇಂಜಿನಿಯರ್ ನೇಮಕಾತಿ ಸೇರಿದಂತೆ ಅನೇಕ ನೇಮಕಾತಿ ಹಗರಣ ನಡೆದಿವೆ. ಇಷ್ಟಾದರೂ ಬಿಜೆಪಿ ಸರ್ಕಾರ ಸಾಕ್ಷಿ ಕೊಡಿ ಎನ್ನುತ್ತಿದೆ. ಈಗ ಬಿಜೆಪಿ ಶಾಸಕರು ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದಾರೆ ಎಂದು ಕುಟುಕಿದ್ದಾರೆ.