ಬೆಂಗಳೂರು : ರಾಜ್ಯದಲ್ಲಿ ಸೈಲೆಂಟ್ ಆಗಿದ್ದ ಧರ್ಮ ದಂಗಲ್ ಕಿಚ್ಚು ಇದೀಗ ಮತ್ತೆ ಸ್ಫೋಟಗೊಳ್ಳುವ ಮುನ್ಸೂಚನೆ ನೀಡಿದೆ. ಕರಾವಳಿಯಲ್ಲಿ ಧರ್ಮ ದಂಗಲ್ ಮತ್ತೆ ಆರಂಭವಾಗಿದೆ.
ಹೌದು, ಉಡುಪಿಯ ಶ್ರೀಕೃಷ್ಣ ಮಠ ಈ ಬಾರಿಯ ಧರ್ಮ ದಂಗಲ್ ಗೆ ಸಾಕ್ಷಿಯಾಗಿದೆ. ಶ್ರೀಕೃಷ್ಣ ಮಠಕ್ಕೆ ಭೂಮಿ ಕೊಟ್ಟಿದ್ದು ಮುಸ್ಲಿಮರು ಎಂದು ಕಾಂಗ್ರೆಸ್ ನಾಯಕ ಮಿಥುನ್ ರೈ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಆ ಮೂಲಕ ಕಾಂಗ್ರೆಸ್ ನಾಯಕ ಬಿಜೆಪಿ ಹಾಗೂ ಶ್ರೀರಾಮಸೇನೆ ಸಂಘಟನೆಗೆ ಆಹಾರವಾಗಿದ್ದಾರೆ.
ಉಡುಪಿಯ ಶ್ರೀಕೃಷ್ಣ ಮಠಕ್ಕೆ ಮುಸ್ಲಿಂ ರಾಜರು ಜಾಗ ಕೊಟ್ಟಿದ್ದು ಎಂಬ ಕಾಂಗ್ರೆಸ್ ನಾಯಕ ಮಿಥುನ್ ರೈ ಹೇಳಿಕೆ ಹಿಂದೂಪರ ಸಂಘಟನೆಗಳು ಕಿಡಿಕಾರಿವೆ. ನಮ್ಮೂರ ಮಸೀದಿ ನೋಡ ಬನ್ನಿ ಕಾರ್ಯಕ್ರಮದಲ್ಲಿ ಮಿಥುನ್ ರೈ, ಶ್ರೀಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು, ಮುಸಲ್ಮಾನ ರಾಜರು ಎಂದು ಹೇಳಿದ್ದಾರೆ.
‘ಪವರ್ ಟಿವಿ’ಗೆ ಮಿಥುನ್ ರೈ ಸ್ಪಷ್ಟನೆ
ದೇಶದಲ್ಲಿ ಸಾವಿರಾರು ದೇವಸ್ಥಾನ ಒಡೆದು ಮಸೀದಿ ಕಟ್ಟಿದ್ದಾರೆ. ಅವರು ಹೇಗೆ ಮಠಕ್ಕೆ ಜಾಗ ಕೊಡುತ್ತಾರೆ ಎಂದು ಸಂಘಟನೆಗಳ ಮುಖಂಡರು ಕಿಡಿಕಾರಿದ್ದಾರೆ. ಇದಕ್ಕೆ ‘ಪವರ್ ಟಿವಿ’ಗೆ ಪ್ರತಿಕ್ರಿಯೆ ನಿಡಿರುವ ಮಿಥುನ್ ರೈ, ಚುನಾವಣೆಗೋಸ್ಕರ ನಾನು ಹೇಳಿಕೆ ಕೊಟ್ಟಿಲ್ಲ. ಬಿಜೆಪಿಯವರು ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ಪೇಜಾವರ ಶ್ರೀಗಳು ಹೇಳಿದ್ದನ್ನು ನಾನು ಉಲ್ಲೇಖ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಪ್ರಮೋದ್ ಮುತಾಲಿಕ್ ಕಿಡಿ
ಕಾಂಗ್ರೆಸ್ ನಾಯಕ ಮಿಥುನ್ ರೈ ವಿವಾದಾತ್ಮಕ ಹೇಳಿಕೆಗೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. ಚುನಾವಣೆ ಸಮೀಪದಲ್ಲಿ ಕಾಂಗ್ರೆಸ್ ನಾಯಕರು ಈ ರೀತಿ ಹೇಳಿಕೆ ನೀಡಿ ಪ್ರಚಾರ ಪಡೆಯುತ್ತಿದ್ದಾರೆ. ಇದು ಚುನಾವಣೆ ಗಿಮಿಕ್. ಮುಸ್ಲಿಂ ಮತದಾರರನ್ನು ಓಲೈಕೆ ಮಾಡುವ ತಂತ್ರ. ಈ ಹೇಳಿಕೆಯನ್ನು ನಾನು ಪ್ರಬಲವಾಗಿ ಖಂಡಿಸುವುದಾಗಿ ಹೇಳಿದ್ದಾರೆ.