ಬೆಂಗಳೂರು : ಲೋಕಾಯುಕ್ತವನ್ನು ಹೈಕೋರ್ಟ್ ಉಳಿಸಿಕೊಂಡಿದ್ದೇ ಹೊರತು, ಬಿಜೆಪಿ ಸರ್ಕಾರವಲ್ಲ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿರುಗೇಟು ಕೊಟ್ಟಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಲೋಕಾಯುಕ್ತವನ್ನು ಕಡೆಗಣಿಸಿ, ಎಸಿಬಿ ಮೂಲಕ ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಹಾಕಿಸುವ ಕಾಂಗ್ರೆಸ್ ನ ನಿಲುವು ಸ್ಪಷ್ಟವಾಗಿದೆ. ಎಸಿಬಿ ಮುಂದುವರೆಯ ಬೇಕೆನ್ನುವುದು ಕಾಂಗ್ರೆಸ್ ನವರ ಅಜೆಂಡಾ ಎಂದು ಕುಟುಕಿದ್ದಾರೆ.
ಕಾಂಗ್ರೆಸ್ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ತಡೆ ಅಧಿನಿಯಮವನ್ನು ತೆಗೆದು, ಲೋಕಾಯುಕ್ತವನ್ನು ಇದ್ದೂ ಇಲ್ಲದ ಹಾಗೆ ಮಾಡಿದ್ದರು. ಲೋಕಾಯುಕ್ತವನ್ನು ನಿಷ್ಕ್ರಿಯಗೊಳಿಸಿ, ಸಂಸ್ಥೆಯನ್ನು ಬಂದ್ ಮಾಡಿಲ್ಲ ಎಂದು ಮಾತಾಡುವುದು ಸರಿಯಲ್ಲ. ಹಾಗಾದರೆ ಕಾಂಗ್ರೆಸ್ ಅವಧಿಯಲ್ಲಿ ಎಲ್ಲ ಪ್ರಕರಣಗಳನ್ನು ಎಸಿಬಿ ವಹಿಸಿದ ಕಾರಣವೇನೆ ಎಂದು ಸಿಎಂ ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಸರ್ಕಾರ ಲೋಕಾಯುಕ್ತಕ್ಕೆ ಶಕ್ತಿ ತುಂಬಿದೆ
ಲೋಕಾಯುಕ್ತ ಉಳಿಸಿಕೊಳ್ಳುವ ಬಗ್ಗೆ ಹೈಕೋರ್ಟ್ ನ ತೀರ್ಮಾನದ ನಂತರ ಲೋಕಾಯುಕ್ತವನ್ನು ಚುರುಕುಗೊಳಿಸಲಾಯಿತು. ಆದರೆ ನ್ಯಾಯಾಲಯದ ತೀರ್ಪಿನಂತೆ ನಮ್ಮ ಸರ್ಕಾರ ಲೋಕಾಯುಕ್ತಕ್ಕೆ ಶಕ್ತಿ ತುಂಬಿರುವುದು ನಮ್ಮ ನೈತಿಕತೆಯನ್ನು ಪ್ರದರ್ಶಿಸಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಮೋದಿ, ಅಮಿತ್ ಶಾ ಬಂದ್ರೆ ‘ಸುನಾಮಿ’ ಶುರುವಾಗುತ್ತಂತೆ..!
ಪ್ರತಿ ವಿಷಯದಲ್ಲಿಯೂ ರಾಜಕಾರಣ
ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ರಾಜ್ಯ ಸರ್ಕಾರ ಮಾಡುವುದಲ್ಲ. ಸಿದ್ದರಾಮಯ್ಯ ಅವರ ಅವಧಿಗಿಂತಲೂ ಮುಂಚಿತವಾಗಿ ಮೈಸೂರು-ಬೆಂಗಳೂರು ಅಷ್ಟಪಥ ಹೆದ್ದಾರಿ ನಿರ್ಮಾಣದ ಯೋಜನೆಯಿತ್ತು. ಆದರೆ, ಈ ರಸ್ತೆ ನಿರ್ಮಾಣ ಯೋಜನೆ ಯಾರ ಅವಧಿಯಲ್ಲಿ ಅನುದಾನ, ಅನುಷ್ಠಾನವಾಯಿತು ಎಂಬುದನ್ನು ಜನರು ಗಮನಿಸಿರುತ್ತಾರೆ. ಆದ್ದರಿಂದ ಪ್ರತಿ ವಿಷಯದಲ್ಲಿಯೂ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.
‘ಕೈ’ ನಿಂದ ಬಂದ್ ನಾಟಕ
ಕಾಂಗ್ರೆಸ್ ನಿಂದ ಬಂದ್ ಮಾಡುವ ನಾಟಕ ಮಾಡಲಾಗುತ್ತಿದ್ದು, ಬಂದ್ ಯಶಸ್ವಿಯಾಗುವುದಿಲ್ಲ. ನೈತಿಕತೆಯಿಂದ ಆಪಾದನೆ ಮಾಡಿ ಹೋರಾಟ ಮಾಡಬೇಕು. ಕಾಂಗ್ರೆಸ್ ನವರು ಭ್ರಷ್ಟಾಚಾರದಲ್ಲಿ ಕೈಯನ್ನು ಕಪ್ಪು ಮಾಡಿಕೊಂಡಿದ್ದು, ಇವರ ಬಂದ್ ಕರೆಗೆ ಜನ ಸ್ಪಂದಿಸುವುದಿಲ್ಲ. ತಮ್ಮ ಭ್ರಷ್ಟಾಚಾರದಿಂದಲೇ ಕಾಂಗ್ರೆಸ್ ಸೋಲನುಭವಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಕುಟುಕಿದ್ದಾರೆ.