ಬೆಂಗಳೂರು: ಬಿಜೆಪಿ ಆಡಳಿತವನ್ನು ಬೆಂಬಲಿಸಿ ಮತ್ತೊಮ್ಮೆ ಬಿಜೆಪಿಗೆ ಕರ್ನಾಟಕದಲ್ಲಿ ಆಡಳಿತಾವಕಾಶ ಕೊಡಿ ಎಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಮನವಿ ಮಾಡಿದ್ದಾರೆ.
ಭಾರತೀಯ ವಿದ್ಯಾಭವನದಲ್ಲಿ ನಡೆದ ಬಿಜೆಪಿ ಪ್ರಣಾಳಿಕೆ ಸಲಹಾ ಸಂಗ್ರಹ ಅಭಿಯಾನದ ಸಭೆಯಲ್ಲಿ ಮಾತನಾಡಿದ ಅವರು, ಭಾರತವನ್ನು ಅಮೃತಕಾಲದಲ್ಲಿ ಸಶಕ್ತ ಮತ್ತು ಸಾಮರ್ಥ್ಯ ಶಾಲಿ ದೇಶವನ್ನಾಗಿ ಮಾಡುವ ಉದ್ದೇಶವನ್ನು ಇಟ್ಟುಕೊಂಡು ಬಿಜೆಪಿ ಪ್ರಣಾಳಿಕೆ ಸಿದ್ಧಪಡಿಸಿ ಜನರ ಮುಂದೆ ಹೋಗಲಿದ್ದೇವೆ ಎಂದು ಹೇಳಿದ್ದಾರೆ.
ಕುಟುಂಬ ಅಧಿಕಾರಕ್ಕೆ ತರುವ ಉದ್ದೇಶವಿಲ್ಲ
ಬಿಜೆಪಿ ಪ್ರಣಾಳಿಕೆಯು ಒಂದು ಕುಟುಂಬವನ್ನು ಅಧಿಕಾರಕ್ಕೆ ತರುವ ಉದ್ದೇಶವನ್ನು ಹೊಂದಿಲ್ಲ. ಒಂದು ವರ್ಗವನ್ನು ಅಧಿಕಾರಕ್ಕೆ ತರುವ ಉದ್ದೇಶ ನಮ್ಮದಲ್ಲ. ಒಂದು ನಿರ್ದಿಷ್ಟ ಮತ ಬ್ಯಾಂಕನ್ನು ತೃಪ್ತಿಪಡಿಸುವ ಉದ್ದೇಶ ನಮ್ಮದಲ್ಲ ಎಂದು ತಿಳಿಸಿದ್ದಾರೆ.
ವಸುಧೈವ ಕುಟುಂಬಕಂ ಚಿಂತನೆ
ಭಾರತವು ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ವಸುಧೈವ ಕುಟುಂಬಕಂ ಚಿಂತನೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಬೆಂಗಳೂರಿಗೆ ಎರಡು ತಲೆಮಾರುಗಳಷ್ಟು ಹಿಂದೆಯೇ ಕಾಂಗ್ರೆಸ್ ಆಡಳಿತದ ಕಾಲದಲ್ಲಿ ಸೆಟಲೈಟ್ ಟೌನ್ ಮಾಡಬೇಕಿತ್ತು.
ಹಲವು ದಶಕಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಪಕ್ಷವು ದೂರದೃಷ್ಟಿಯನ್ನು ಹೊಂದಿರದ ಕಾರಣ ಬೆಂಗಳೂರಿನಂಥ ನಗರಗಳು ಮಾಲಿನ್ಯದ ಸಮಸ್ಯೆಯನ್ನು ಎದುರಿಸಬೇಕಾಗಿದೆ ಎಂದ ಅವರು, ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತನೆ ಮಾಡುವ ಕಾರ್ಯ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.