ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಕಣ ದಿನೇ ದಿನೆ ರಂಗೇರುತ್ತಿದೆ. ಮತ್ತೊಂದೆಡೆ, ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಬಂದು ತಮ್ಮ ಪಕ್ಷದ ಪರ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬಂದರೆ ಸುನಾಮಿ ಶುರುವಾಗುತ್ತೆ ಅಂತಾ ಬಿಜೆಪಿ ಸಿಎಂ ಹೇಳಿಕೆ ಕೊಟ್ಟಿದ್ದಾರೆ.
ಹೌದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಹಾಡಿ ಹೊಗಳಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ ರಾಜ್ಯಕ್ಕೆ ಬಂದರೆ ಸುನಾಮಿ ಶುರುವಾಗುತ್ತದೆ. ಮಾರ್ಚ್ 24ಕ್ಕೆ ದಾವಣಗೆರೆಯಲ್ಲಿ ಸುನಾಮಿಗಳ ಸಂಗಮವಾಗಲಿದೆ ಎಂದು ಹೇಳಿದ್ದಾರೆ.
ಅಶೋಕ್ ಹೃದಯ ಗೆದ್ದ ಸಾಮ್ರಾಟ್
ಬೆಂಗಳೂರಿನ ಬಸವನಗುಡಿ ಹಾಗೂ ಪದ್ಮನಾಭನಗರ ಕ್ಷೇತ್ರದಲ್ಲಿ ಬಿಜೆಪಿ ವಿಜಯಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು, ಸಚಿವ ಆರ್.ಅಶೋಕ್ ಅವರು ತಮ್ಮ ಕೆಲಸದ ಮೂಲಕ ನಿಮ್ಮೆಲ್ಲರ ಹೃದಯ ಗೆದ್ದು ಹೃದಯ ಸಾಮ್ರಾಟ್ ಆಗಿದ್ದಾರೆ. ಕಳೆದ ಬಾರಿ 30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ದೇವೇಗೌಡ್ರು ಪ್ರೀತಿ ಮುಂದೆ ಅಮಿತ್ ಶಾ ‘ಡೈನಾಮಿಕ್’ ವರ್ಕೌಟ್ ಆಗಲ್ಲ : ಎಚ್.ಡಿ ಕುಮಾರಸ್ವಾಮಿ
ಪದ್ಮನಾಭನಗರದ ನಾಗರಿಕರು ಬಹಳ ಪ್ರೀತಿ ತೋರಿದ್ದು, ನಿಮ್ಮ ನೆಚ್ಚಿನ ನಾಯಕ ಅಶೋಕ್ ಅವರು ಕಳೆದ ಐದು ವರ್ಷದಲ್ಲಿ ಮಾಡಿದ ಸಾಧನೆಗೆ ನಿಮ್ಮ ಬೆಂಬಲ ಸೂಚಿಸಿದ್ದೀರಿ. ಮುಂದಿನ ಚುನಾವಣೆಯಲ್ಲಿ ಮತ್ತೆ ಅವರನ್ನು ಬೆಂಬಲಿಸಿ ಎಂದು ಸಿಎಂ ಬೊಮ್ಮಾಯಿ ಕರೆ ನೀಡಿದ್ದಾರೆ.
140 ಸ್ಥಾನ ಪಡೆದು ವಿಧಾನಸೌಧಕ್ಕೆ ಹೋಗ್ತೀವಿ
ಇಡೀ ಕರ್ನಾಟಕದಲ್ಲಿ ಎಲ್ಲೆಡೆ ಇದೇ ರೀತಿಯ ಬೆಂಬಲ ಜನರಿಂದ ದೊರೆಯುತ್ತಿದೆ. ಈ ಬಾರಿ ನಡೆಯುವ ಚುನಾವಣೆಯಲ್ಲಿ ಸೂರ್ಯ ಪೂರ್ವದಲ್ಲಿ ಹುಟ್ಟುವುದು ಎಷ್ಟು ಸತ್ಯವೋ ಅದೇ ರೀತಿ ರಾಜ್ಯದಲ್ಲಿ 140 ಸ್ಥಾನ ಪಡೆದು ಬಿಜೆಪಿ ವಿಧಾನಸೌಧದ ಮೂರನೇ ಮಹಡಿಯಲ್ಲಿ ಮತ್ತೆ ಬಿಜೆಪಿ ಅಧಿಕಾರ ಸ್ವೀಕರಿಸುವ ಸುಸಂದರ್ಭ ಬರುವುದು ಅಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವ ಆರ್. ಅಶೋಕ್, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ರವಿಸುಬ್ರಮಣ್ಯ, ಎಂ. ಕೃಷ್ಣಪ್ಪ ಹಾಗೂ ಮತ್ತಿತರಿದ್ದರು.