ಬೆಂಗಳೂರು : ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ತಂಡಕ್ಕೆ ಮೇಲಿಂದ ಮೇಲೆ ಕಹಿ ಸುದ್ದಿ ಎದುರಾಗುತ್ತಿದ್ದು, ಇದೀಗ ಮತ್ತೊಂದು ಆಘಾತ ಉಂಟಾಗಿದೆ.
ಹೌದು, ಆತಿಥೇಯ ಭಾರತದ ವಿರುದ್ಧ ನಡೆಯುತ್ತಿರುವ ಬಾರ್ಡರ್-ಗಾವಸ್ಕರ್ ಟೆಸ್ಟ್ ಕ್ರಿಕೆಟ್ ಸರಣಿಯ ನಾಲ್ಕನೇ ಪಂದ್ಯದಿಂದಲೂ ಆಸಿಸಿ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ದೂರ ಉಳಿಯಲಿದ್ದಾರೆ. ಹೀಗಾಗಿ, ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದಾರೆ.
ನಾಯಕ ಪ್ಯಾಟ್ ಕಮಿನ್ಸ್ ಅವರು ತಮ್ಮ ತಾಯಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾಗೆ ವಾಪಸ್ ಆಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಸರಣಿಯ ಮೊದಲೆರಡು ಪಂದ್ಯಗಳಿಗೆ ತಂಡ ಮುನ್ನಡೆಸಿದ್ದ ಕಮಿನ್ಸ್, ಬಳಿಕ ತವರಿಗೆ ಮರಳಿದ್ದರು. ಆ ಎರಡೂ ಪಂದ್ಯಗಳನ್ನು ಭಾರತ ಗೆದ್ದುಕೊಂಡಿತ್ತು.
ಇದನ್ನೂ ಓದಿ : ಬದ್ಧತೆ ಅಂದ್ರೆ ಇದೇ ಅಲ್ವಾ: ರಕ್ತ ಸುರಿಯುತ್ತಿದ್ದರೂ ಬೌಲಿಂಗ್ ಮಾಡಿದ ಆಸಿಸ್ ವೇಗಿ
4ನೇ ಪಂದ್ಯಕ್ಕೆ ಸ್ಮಿತ್ ನಾಯಕ
ಎರಡು ಪಂದ್ಯಗಳ ಸೋಲಿನ ಬಳಿಕ ಸ್ಮಿತ್ ಗೆ ಆಸಿಸಿ ನಾಯಕತ್ವದ ಹೊಣೆ ಸಿಕ್ಕಿತ್ತು. ಅದರಂತೆ ಇಂದೋರ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಸ್ಮಿತ್ ಆಸಿಸ್ ತಂಡವನ್ನು ಮುನ್ನಡೆಸಿದ್ದರು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 9 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿತ್ತು. ಇದು ಕಳೆದ ಆರು ವರ್ಷಗಳಲ್ಲಿ ಭಾರತದ ನೆಲದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಸಿಕ್ಕ ಮೊದಲ ಗೆಲುವಾಗಿತ್ತು.
ಮೂರನೇ ಟೆಸ್ಟ್ ಪಂದ್ಯದ ಜಯದೊಂದಿಗೆ ಆಸ್ಟ್ರೇಲಿಯಾ ತಂಡವು ಜೂನ್ ತಿಂಗಳಲ್ಲಿ ಲಂಡನ್‌ನಲ್ಲಿ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಗಿಟ್ಟಿಸಿದೆ. ಉಳಿದಂತೆ, ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಗೆ ಆಯ್ಕೆಯಾಗಿದ್ದ ವೇಗಿ ಜೇ ರಿಚರ್ಸ್ಸನ್ ಕೂಡ ಗಾಯದ ಸಮಸ್ಯೆಯಿಂದ ಸರಣಿಯಿಂದ ಹೊರಗುಳಿದಿದ್ದಾರೆ.