ಬೆಂಗಳೂರು : ಪ್ರಧಾನಿ ನರೇಮದ್ರ ಮೋದಿ ಅವರು ಆಡಿದ್ದನ್ನೇ ಮಾಡಿ ತೋರಿಸಿದವರು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ್ದಾರೆ.
ಬೆಂಗಳೂರಿನ ಮಹದೇವಪುರದ ಬಳಿಯ ಕುಂದಲಹಳ್ಳಿ ಗೇಟ್ ಸಿಗ್ನಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಮಹಿಳಾ ಮೋರ್ಚಾ ಬೆಂಗಳೂರು ಕೇಂದ್ರ ಜಿಲ್ಲಾ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ.
ದೇಶದ ಮೊದಲ ಪ್ರಜೆ ಇವತ್ತು ಮಹಿಳೆ
ದೇಶದ ಅಭಿವೃದ್ಧಿಯ ಪಯಣದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು. ದೇಶದ ಮೊದಲ ಪ್ರಜೆ ಇವತ್ತು ಮಹಿಳೆ ಎಂದು ಹೇಳಲು ನಮಗೆ ಹೆಮ್ಮೆ ಇದೆ. ದೇಶಕ್ಕೆ ಹಲವು ವರ್ಷಗಳಿಂದ ಬಜೆಟ್ ಕೊಟ್ಟವರೂ ಮಹಿಳೆ ನಿರ್ಮಲಾ ಸೀತಾರಾಮನ್ ಎನ್ನಲು ಹೆಮ್ಮೆ ಪಡುಬೇಕು ಎಂದು ತಿಳಿಸಿದ್ದಾರೆ.
ಮೋದಿ ದೇಶದ ಅಭಿವೃದ್ಧಿಗೆ ದುಡಿಯುತ್ತಿದ್ದಾರೆ
ಮಹಿಳೆಯರು ಸಾಧಿಸಿದ ಪ್ರಗತಿಯ ಮಟ್ಟದಿಂದ ಸಮುದಾಯದ ಪ್ರಗತಿಯನ್ನು ಅಳೆಯಬೇಕಾಗುತ್ತದೆ ಎಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದನ್ನು ಉಲ್ಲೇಖಿಸಿದರು. ಇದೇ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಗೆ 17-18 ಗಂಟೆ ದುಡಿಯುತ್ತಿದ್ದಾರೆ ಎಂದು ಹೇಳಿದ್ದಾರೆ.
ದೇಶವನ್ನು ಭ್ರಷ್ಟಾಚಾರದ ಸುಳಿಗೆ ಸಿಲುಕಿಸಿದ್ದು ಕಾಂಗ್ರೆಸ್
2014ವರೆಗೆ 10 ವರ್ಷ ಆಡಳಿತ ನಡೆಸಿದ ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ, ದೇಶವನ್ನು ಭ್ರಷ್ಟಾಚಾರದ ಸುಳಿಗೆ ಸಿಲುಕಿಸಿದರು. ಸಾವಿರಾರು ಕೋಟಿ ಮೊತ್ತದ ಭ್ರಷ್ಟಾಚಾರ ನಡೆದಿತ್ತು ಎಂದ ಅವರು, ಭ್ರಷ್ಟಾಚಾರದ ಕೂಸನ್ನು ಹುಟ್ಟಿಸಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಂಸದ ಪಿ.ಸಿ. ಮೋಹನ್, ಅರವಿಂದ ಲಿಂಬಾವಳಿ, ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಮಾಲವಿಕಾ ಅವಿನಾಶ್, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಗೀತಾ ವಿವೇಕಾನಂದ, ಮಹಿಳಾ ಮೋರ್ಚಾ ಬೆಂಗಳೂರು ಕೇಂದ್ರ ಜಿಲ್ಲೆ ಅಧ್ಯಕ್ಷೆ ರೇಖಾ ಕೆ. ಗೋವಿಂದ್ ಭಾಗವಹಿಸಿದ್ದರು.