Friday, March 29, 2024

ಚುನಾವಣಾ ದಿನಾಂಕ ಘೋಷಣೆ & ನೀತಿ ಸಂಹಿತೆ ಜಾರಿಗೆ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು: ಸಾಂವಿಧಾನಿಕ ಕರ್ತವ್ಯ ಮತ್ತು ಕಾನೂನು-ಕಟ್ಟಳೆಗಳನ್ನು ಮೀರಿ ರಾಜ್ಯದಲ್ಲಿ ನಡೆಯುತ್ತಿರುವ ಸರ್ಕಾರಿ ಯಂತ್ರದ ದುರುಪಯೋಗ ಮತ್ತು ಗುತ್ತಿಗೆದಾರರಿಂದ ನಡೆಯುತ್ತಿರುವ ಹಣದ ಸುಲಿಗೆಯನ್ನು ತಡೆಯಲು ತಕ್ಷಣ ವಿಧಾನಸಭೆಯ ಚುನಾವಣಾ ದಿನಾಂಕವನ್ನು ಘೋಷಿಸಿ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಜಾರಿಗೆ ತರಬೇಕೆಂದು ಕೇಂದ್ರ ಚುನಾವಣಾ ಆಯೋಗವನ್ನು ಆಗ್ರಹಿಸುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಸಾಮಾಜಿಕ ತಾಣದಲ್ಲಿ ಬರೆದುಕೊಂಡಿರುವ ಅವರು, ಶೀಘ್ರದಲ್ಲಿ ಪಕ್ಷದ ಹಿರಿಯ ನಾಯಕರ ಜೊತೆಯಲ್ಲಿ ಚರ್ಚಿಸಿ ರಾಜ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ಈ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿಪತ್ರ ಸಲ್ಲಿಸುತ್ತೇವೆ ಎಂದಿದ್ದಾರೆ.

ಪ್ರಧಾನಿ ಮತ್ತು ಗೃಹಸಚಿವರ ಪ್ರವಾಸ ಕಾರ್ಯಕ್ರಮಕ್ಕಾಗಿ ಸರ್ಕಾರಿ ಖಜಾನೆಯಲ್ಲಿನ ಜನರ ತೆರಿಗೆ ಹಣ ಖರ್ಚಾಗುತ್ತಿದೆ. ಜನರ ತೆರಿಗೆ ಹಣದಿಂದಲೇ ಚುನಾವಣಾ ಪ್ರಚಾರ ನಡೆಸುತ್ತಿರುವುದು ಕಾನೂನು ಉಲ್ಲಂಘನೆ ಮಾತ್ರವಲ್ಲ ಲಜ್ಜೆಗೇಡಿ ನಡವಳಿಕೆ ಎಂದು ಡಬಲ್​ ಇಂಜಿನ್​ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಚುನಾವಣೆಯಲ್ಲಿ ಸೋಲಿನ ಭೀತಿಯಲ್ಲಿರುವ ಬಿಜೆಪಿ ಇನ್ನೊಂದು ಆಪರೇಷನ್ ಕಮಲಕ್ಕೆ ರೆಡಿಯಾಗುತ್ತಿದೆ. ಇದಕ್ಕಾಗಿ ಬಿಜೆಪಿಯ ಪ್ರತಿಯೊಬ್ಬ ನಾಯಕರು ಸುಲಿಗೆಗೆ ಇಳಿದಿದ್ದಾರೆ. ಪ್ರತಿಯೊಬ್ಬ ಸಚಿವರಿಗೂ ಟಾರ್ಗೆಟ್ ಕೊಡಲಾಗಿದೆಯಂತೆ. ಲಂಚದ ಪರ್ಸೆಟೇಜ್ 40 ದಾಟಿ 50-60ಕ್ಕೆ ಹೋಗಿದೆ. ಪ್ರತಿಯೊಬ್ಬ ಸಚಿವರ ಕಚೇರಿಯೂ ಸುಲಿಗೆಯ ಕೇಂದ್ರಗಳಾಗುತ್ತಿದೆ. ಇದಕ್ಕಾಗಿ ಅಧಿಕಾರಿಗಳನ್ನು ಕೂಡಾ ದುರ್ಬಳಕೆ ಮಾಡಲಾಗುತ್ತಿದೆ. ಇದಕ್ಕೆ ದಾವಣಗೆರೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಮಗ ಲಂಚ ಪಡೆಯುತ್ತಿರುವಾಗ ಲೋಕಾಯುಕ್ತರ ಕೈಗೆ ಸಿಕ್ಕಿ ಹಾಕಿಕೊಂಡಿರುವುದೇ ಸಾಕ್ಷಿ. ಗುತ್ತಿಗೆದಾರರ ಸುಲಿಗೆ ಇದೇ ರೀತಿ ಮುಂದುವರಿದರೆ ಇನ್ನೂ ಕೆಲವು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡರೆ ಆಶ್ಚರ್ಯ ಇಲ್ಲ ಎಂದು ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.

ರಾಜ್ಯಸರ್ಕಾರದ ಭ್ರಷ್ಟಾಚಾರದ ಬಗ್ಗೆ ನಾವು ಮಾತನಾಡಿದರೆ ಪುರಾವೆ ಎಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮ್ಮನ್ನು ಮರುಪ್ರಶ್ನೆ ಮಾಡುತ್ತಾರೆ. ಬಿಜೆಪಿ ಸಚಿವ-ಶಾಸಕರ ಲಂಚಾವತಾರಕ್ಕೆ ಬೇಸತ್ತು ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪ್ರಧಾನಿಗೆ ಪತ್ರ ಬರೆದಿದ್ದಾರೆ, ಲಂಚ ನೀಡಿ ಎಲ್ಲವನ್ನೂ ಕಳೆದುಕೊಂಡಿದ್ದ ಒಬ್ಬ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡ, ಈಗ ಲಂಚ ಪಡೆಯುತ್ತಿದ್ದಾಗಲೇ ದಾವಣಗೆರೆ ಶಾಸಕನ ಮಗ ಲೋಕಾಯುಕ್ತರ ಕೈಗೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದಿದ್ದಾನೆ. ಇನ್ನೆಷ್ಟು ಪುರಾವೆ ಬೇಕು ಮುಖ್ಯಮಂತ್ರಿಗಳೇ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES