ಬೆಂಗಳೂರು : ರಾಜ್ಯ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಬಗ್ಗೆ ಕಾಂಗ್ರೆಸ್ ನಾಯಕರು ಸಿಂಪತಿಯ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಕಂದಾಯ ಸಚಿವ ಆರ್. ಅಶೋಕ್ ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ ಪಕ್ಷ ನಮ್ಮ ನಾಯಕರಾದ ಬಿ.ಎಸ್ ಯಡಿಯೂರಪ್ಪ ಅವರ ಮೇಲೆ ಸಿಂಪತಿ ಇಡುವ ಕೆಲಸ ಮಾಡುತ್ತಿದೆ. ಯಡಿಯೂರಪ್ಪ ಅವರನ್ನು ಜೈಲಿಗೆ ಹಾಕಿದ್ದು ಯಾರು? ಇದೇ ಯುಪಿಎ ಸರ್ಕಾರ ಯಡಿಯೂರಪ್ಪ ಅವರನ್ನು ಜೈಲಿಗೆ ಹಾಕಿತ್ತು ಎಂದು ಹೇಳಿದ್ದಾರೆ.
ಕಾಂಗ್ರೆಸ್ಗೆ ಭಯ ಶುರುವಾಗಿದೆ
ಜನಾರ್ದನ ರೆಡ್ಡಿ ಅವರನ್ನು ಜೈಲಿಗೆ ಹಾಕಿದ್ದು ಇದೇ ಕಾಂಗ್ರೆಸ್. ಈಗ ನಮ್ಮ ನಾಯಕರ ಬಗ್ಗೆ ಸಿಂಪತಿ ತೋರಿಸ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಯಡಿಯೂರಪ್ಪ ಅವರು ಭಾಷಣ ಮಾಡಿದ್ರೆ ಭಯ. ಹೀಗಾಗಿ, ಕಾಂಗ್ರೆಸ್ ನಾಯಕರು ಯಡಿಯೂರಪ್ಪ ಅವರ ಮೇಲೆ ಸಿಂಪತಿ ತೋರಿಸುತ್ತಿದ್ದಾರೆ ಎಂದು ಕುಟುಕಿದ್ದಾರೆ.
ಇದನ್ನೂ ಓದಿ : ಗ್ರೌಂಡ್ ರಿಪೋರ್ಟ್ ಕಲೆ ಹಾಕಲು ಫೀಲ್ಡಿಗಿಳಿದ ಮಾಜಿ ಸಿಎಂ ಸಿದ್ದು..!
ಯಡಿಯೂರಪ್ಪ ನಿವೃತ್ತಿ ಪಡೆದಿಲ್ಲ
ಬಿ.ಎಸ್ ಯಡಿಯೂರಪ್ಪ ಅವರು ನಮ್ಮ ನಾಯಕ. ಅವರು ರಾಜಕೀಯದಿಂದ ನಿವೃತ್ತಿ ಪಡೆದಿಲ್ಲ. ಕೇವಲ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದಾರೆ. ಅವರು ಅಧಿಕಾರದಲ್ಲಿ ಇಲ್ಲದೆ ಇದ್ರು ಸಕ್ರಿಯ ರಾಜಕೀಯದಲ್ಲಿ ಇದ್ದಾರೆ. ಮುಂದೆಯೂ ಇರುತ್ತಾರೆ. ಅದರಲ್ಲಿ ಯಾವುದೇ ಪ್ರಶ್ನೆ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಲೆಕ್ಕಾಚಾರದಲ್ಲಿ ನಾವೇ ಮುಂದೆ
ಇನ್ನೂ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವೇ ಹೆಚ್ಚು ಸ್ಥಾನ ಗಳಿಸಲಿದೆ ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಸರ್ವೆಯಲ್ಲಿ ಬಿಜೆಪಿ ಎಷ್ಟು ಸಿಟ್ ಗೆಲ್ಲಲಿದೆ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಎಷ್ಟು ಸೀಟು ಗೆಲ್ಲಲಿದೆ ಎಂದು ಹೇಳಲ್ಲ. ಈಗಿರೋ ಲೆಕ್ಕದಲ್ಲಿ ನಾವೇ ಹೆಚ್ಚು ಸೀಟಿನಲ್ಲಿದ್ದೇವೆ ಎನ್ನುತ್ತಾ, ಎಷ್ಟು ಸ್ಥಾನ ಅಂತ ನಿರ್ದಿಷ್ಟವಾಗಿ ಹೇಳದೆಯೇ ಅಶೋಕ್ ಜಾರಿಕೊಂಡಿದ್ದಾರೆ.