Sunday, December 29, 2024

ಷಡಕ್ಷರಿ ನಿರ್ಧಾರಕ್ಕೆ ಸಚಿವಾಲಯ ನೌಕರ ಸಂಘದ ಅಧ್ಯಕ್ಷ ಗುರುಸ್ವಾಮಿ ವಿರೋಧ

ಬೆಂಗಳೂರು : ವೇತನ ಹೆಚ್ಚಳ ಘೋಷಣೆ ಬಳಿಕ ರಾಜ್ಯ ಸರ್ಕಾರಿ ನೌಕರರ ಮುಷ್ಕರವನ್ನು ರಾಜ್ಯಾಧ್ಯಕ್ಷ ಷಡಕ್ಷರಿ ಹಿಂಪಡೆದಿದ್ದಾರೆ. ಆದರೆ, ವಿಧಾನಸಭಾ ಸಚಿವಾಲಯದ ನೌಕರರ ಇದಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದೆ.

ರಾಜ್ಯಾಧ್ಯಕ್ಷ ಷಡಕ್ಷರಿ ಏಕಪಕ್ಷೀಯ ನಿರ್ಧಾರಕ್ಕೆ ಸಚಿವಾಲಯ ನೌಕರ ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿ ಹರಿಹಾಯ್ದಿದ್ದಾರೆ. ಸಚಿವಾಲಯದ ಆಪ್ತ ಸಹಾಯಕ, ಆಪ್ತ ಕಾರ್ಯದರ್ಶಿಗಳ ಸಂಘದ ಅಧ್ಯಕ್ಷ ಶ್ರೀಧರ್‌ಮೂರ್ತಿ ಎಸ್ ಪಂಡಿತ್ ಸಹ ಪಿ.ಗುರುಸ್ವಾಮಿ ಹೇಳಿಕೆಗೆ ಬೆಂಬಲ ಸೂಚಿಸಿದ್ದಾರೆ.

ಇದನ್ನೂ ಓದಿ: ಸರ್ಕಾರಿ ನೌಕರರ ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ಸಮಿತಿ ರಚನೆ : ಸಿಎಂ ಬೊಮ್ಮಾಯಿ

ಸರ್ಕಾರಿ‌ ನೌಕರರ ಪ್ರಮುಖ ಬೇಡಿಕೆಯಾಗಿದ್ದ ಶೇ.40ರಷ್ಟು ವೇತನ‌ ಹೆಚ್ಚಳವನ್ನು ಸರ್ಕಾರ ಪೂರೈಸದೇ ಕೇವಲ ಶೇ.17ರಷ್ಟು ಅದು ಕೂಡ ಬರುವ ಏಪ್ರಿಲ್ ನಿಂದ ಜಾರಿಗೊಳಿಸಿದೆ. ಆದರೆ ಈ ಮಧ್ಯಂತರ ಆದೇಶ ತೃಪ್ತಿ‌ತಂದಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ ಮಧ್ಯಂತರ ಆದೇಶ ಶೇ.25 ರಷ್ಟನ್ನಾದರೂ ಜಾರಿಗೊಳಿಸಬೇಕಿತ್ತು. ಅಲ್ಲದೇ, 2022 ಜುಲೈ‌ 1ರಿಂದಲೇ 7ನೇ‌ವೇತನ ಆಯೋಗ ಸೌಲಭ್ಯ ಜಾರಿಗೊಳ್ಳಬೇಕಿತ್ತು. ಆದರೆ, ಸರ್ಕಾರ ಈಗ ಮುಷ್ಕರವನ್ನು ಹತ್ತಿಕ್ಕಲು ಈ ಮಧ್ಯಂತರ ಪರಿಹಾರ ಆದೇಶ ಮಾಡಿರುವುದು ಕಣ್ಣೊರೆಸುವ ತಂತ್ರವಷ್ಟೇ ಎಂದು ಆಕ್ರೋಶ ಹೊರಹಾಕಿದ್ದಾರೆ.

ಮತ್ತೊಂದು ಪ್ರಮುಖ ಬೇಡಿಕೆಯಾದ ಎನ್‌ಪಿ‌ಎಸ್ ರದ್ದುಪಡಿಸಿ ಓಪಿಎಸ್ ಅನ್ನು ಜಾರಿ ಮಾಡುವ ಪ್ರಮುಖ ಬೇಡಿಕೆಯ ಪರಿಶೀಲನೆಗೆ ಸಮಿತಿ ರಚನೆ ಮಾಡುವುದಾಗಿ ಹೇಳಿದ್ದಾರಾದರೂ ಈ ಹಿಂದೆ ಮಾಡಿರುವ ಸಮಿತಿ ಏನಾಯಿತು? ಎಂದು ಪ್ರಶ್ನಿಸಿರುವ ಗುರುಸ್ವಾಮಿ, ಇದೊಂದು ಸರ್ಕಾರದ ಕಣ್ಣೊರೆಸುವ ತಂತ್ರವಷ್ಟೇ ಎಂದು ಗುಡುಗಿದ್ದಾರೆ.

ಇದನ್ನೂ ಓದಿ: ಸಿಎಂ ಆಗೋದು ಹಣೆಯಲ್ಲಿ ಬರೆದಿರಬೇಕು : ಡಿಕೆಶಿಗೆ ಟಾಂಗ್ ಕೊಟ್ಟ ಆರ್. ಅಶೋಕ್

ಸರ್ಕಾರದ ಕಣ್ಣೊರೆಸುವ ತಂತ್ರ

ಪ್ರಮುಖವಾಗಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಬೇಡಿಕೆಗಳ ಈಡೇರಿಕೆಗೆ ಮುಷ್ಕರ ಆರಂಭಿಸುವ ಮುನ್ನ ಸಚಿವಾಲಯದ ನೌಕರರ ಸಂಘ ಸೇರಿದಂತೆ ಎಲ್ಲಾ ವೃಂದ ಸಂಘಗಳ ಜೊತೆ ಚರ್ಚಿಸಿದ್ದರು. ಆದರೆ, ಈಗ ಸರ್ಕಾರದ ಕಣ್ಣೊರೆಸುವ ತಂತ್ರಕ್ಕೆ ಮಣಿದು ಮುಷ್ಕರವನ್ನು ಏಕಾಏಕಿಯಾಗಿ ಹಿಂಪಡೆಯಲು ಹೇಳಿದ್ದು ಸರಿಯಲ್ಲ ಎಂದು ಹೇಳಿದ್ದಾರೆ.

ಏಕ ಪಕ್ಷೀಯ ನಿರ್ಣಯಕ್ಕೆ ಖಂಡನೆ

ಷಡಕ್ಷರಿಯವರ ಈ ರೀತಿಯ ಏಕಪಕ್ಷೀಯ ನಿರ್ಣಯ ಸರಿಯಲ್ಲ. ಮುಷ್ಕರ ಕರೆಯುವ ಮೊದಲು ನಮ್ಮೊಂದಿಗೆ ಚರ್ಚಿಸಿದ್ದು ಈಗ ಮುಷ್ಕರ ಹಿಂಪಡೆಯುವಾಗ ವೃಂದ ಸಂಘಗಳ ಜೊತೆ ಚರ್ಚಿಸಿಲ್ಲ‌ ಏಕೆ? ಷಡಕ್ಷರಿಯವರ ಏಕ ಪಕ್ಷೀಯ ನಿರ್ಣಯವನ್ನು ಖಂಡಿಸಲಾಗುತ್ತದೆ ಎಂದು ಸಚಿವಾಲಯದ ನೌಕರರ ಸಂಘ ಎಚ್ಚರಿಸಿದೆ.

RELATED ARTICLES

Related Articles

TRENDING ARTICLES