ಬೆಂಗಳೂರು: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಿದೆ. ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಸರ್ ರವೀಂದ್ರ ಜಡೇಜಾ ಅಪರೂಪದ ಸಾಧನೆಯೊಂದನ್ನು ಮಾಡಿದ್ದಾರೆ.
ಮೊದಲೆರಡು ಟೆಸ್ಟ್ ಪಂದ್ಯಗಳನ್ನು ಗೆದ್ದಿರುವ ಭಾರತ ಇಂದು ಮೂರನೇ ಟೆಸ್ಟ್ ಪಂದ್ಯವಾಡುತ್ತಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬ್ಯಾಟರ್ ಟ್ರಾವಿಸ್ ಹೆಡ್ ವಿಕೆಟ್ ಪಡೆಯುವ ಮೂಲಕ ರವೀಂದ್ರ ಜಡೇಜಾ ಅವರು ಅಂತರಾಷ್ಟ್ರೀಯ ಪಂದ್ಯಗಳಲ್ಲಿ 500 ವಿಕೆಟ್ ಹಾಗೂ 5,000 ರನ್ ಗಳಿಸಿದ ಎರಡನೇ ಭಾರತೀಯ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಅಂತರಾಷ್ಟ್ರೀಯ ಪಂದ್ಯಗಳಲ್ಲಿ ರವೀಂದ್ರ ಜಡೇಜಾ ಅವರು ಈಗಾಗಲೇ 5,523 ರನ್ ಗಳಿಸಿದ್ದಾರೆ. ಜಡೇಜಾಗೂ ಮೊದಲು ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರರಾಗಿದ್ದಾರೆ. ಕಪಿಲ್ ದೇವ್ ಅವರು 9,031 ರನ್ ಹಾಗೂ 687 ವಿಕೆಟ್ ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.
ಟೀಂ ಇಂಡಿಯಾದ್ದೇ ದರ್ಬಾರ್
ಐಸಿಸಿ ಟೆಸ್ಟ್, ಏಕದಿನ, ಟಿ-20ಯಲ್ಲಿ ಭಾರತದ ಆಟಗಾರರು ಮೇಲುಗೈ ಸಾಧಿಸಿದ್ದಾರೆ. ಐಸಿಸಿ ಟೆಸ್ಟ್ ಬೌಲರ್ಗಳ ರ್ಯಾಂಕಿಂಗ್ ಬಿಡುಗಡೆಗೊಂಡಿದ್ದು, ಭಾರತದ ಆರ್. ಅಶ್ವಿನ್ ನಂಬರ್ 1 ಸ್ಥಾನ ಅಲಂಕರಿಸಿದ್ದಾರೆ. ಆ ಮೂಲಕ ವಿಶ್ವ ಕ್ರಿಕೆಟ್ನಲ್ಲಿ ಭಾರತೀಯ ದರ್ಬಾರ್ ಮುಂದುವರಿದಿದೆ.
ಇವರಿಗೆಲ್ಲಾ ನ.1 ಪಟ್ಟ
ಇನ್ನೂ, ಐಸಿಸಿ ಏಕದಿನ ಹಾಗೂ ಟಿ-20 ತಂಡದ ರ್ಯಾಂಕಿಂಗ್ನಲ್ಲಿ ಭಾರತ ಪ್ರಥಮ ಸ್ಥಾನ ಅಲಂಕರಿಸಿದೆ. ಸೂರ್ಯಕುಮಾರ್ ಟಿ-20ಯಲ್ಲಿ ನಂ.1 ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಏಕದಿನ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ನಂ.1 ಬೌಲರ್ ಆಗಿದ್ದರೆ, ಟೆಸ್ಟ್ ಆಲ್ರೌಂಡರ್ ಪಟ್ಟಿಯಲ್ಲಿ ರವೀಂದ್ರ ಜಡೇಜಾ ನಂ.1 ಸ್ಥಾನದಲ್ಲಿ ಮುಂದುವರಿದ್ದಾರೆ.
ಇದೀಗ ಈ ಸಾಲಿಗೆ ಆರ್. ಅಶ್ವಿನ್ ಸಹ ಸೇರಿದ್ದಾರೆ. ಈ ಮೂಲಕ ಎಲ್ಲಾ ಮಾದರಿಯ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾರತೀಯ ಆಟಗಾರರ ದರ್ಬಾರ್ ಮುಂದುವರಿದಿದೆ.