ಮೈಸೂರು : ಟಿ.ನರಸೀಪುರ ತಾಲೂಕಿನಲ್ಲಿ ಚಿರತೆ ದಾಳಿಗೊಳಗಾಗಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟ ಪ್ರಕರಣ ಸಂಬಂಧ ಮೃತ ಯುವತಿ ಕುಟುಂಬಕ್ಕೆ 7.5 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲೇ 5 ಲಕ್ಷ ಪರಿಹಾರದ ಚೆಕ್ ವಿತರಿಸಿದರು. ಇದೇ ವೇಳೆ ಕುಟುಂಬದ ಒಬ್ಬರಿಗೆ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿದ್ದಾರೆ. ತಾಲೂಕಿನಲ್ಲಿ ಚಿರತೆ ದಾಳಿಗೆ ಇಬ್ಬರು ಬಲಿಯಾದ ಹಿನ್ನೆಲೆ ಆಕ್ರೋಶಗೊಂಡಿರುವ ಗ್ರಾಮದ ಜನರು ಧರಣಿ ಕುಳಿತಿದ್ದರು. ಆನಂತರ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು, ಆರ್ಎಫ್ಒಗೆ ಕಡ್ಡಾಯ ರಜೆ ನೀಡಿ ತನಿಖೆ ಬಳಿಕ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಗ್ರಾಮಸ್ಥರು ಧರಣಿಯನ್ನು ಕೈಬಿಟ್ಟರು. ತಾಲೂಕಿನಲ್ಲಿ ಚಿರತೆ ಹಾವಳಿ ಇರುವ ಹಿನ್ನೆಲೆ 15 ತಂಡಗಳನ್ನು ರಚನೆ ಮಾಡಿ ಬೇರೆ ಬೇರೆ ಕಡೆಗಳಲ್ಲಿ ಕಾರ್ಯಾಚರಣೆಗೆ ಇಳಿಸುತ್ತೇವೆ. 7 ದಿನಗಳ ಒಳಗೆ ಕಂಡಲ್ಲಿ ಗುಂಡು ಹಾರಿಸಿ ಚಿರತೆಯನ್ನು ಸೆರೆ ಹಿಡಿಯುವ ಕಾರ್ಯ ನಾವು ಮಾಡುತ್ತೇವೆ. ಆರ್ಎಫ್ಒ ಅವರನ್ನು ಕಡ್ಡಾಯ ರಜೆ ಮೇಲೆ ಹೋಗಲು ಸೂಚಿಸಲಾಗಿದೆ. ಡಿ.2ರಿಂದ ಅವರು ರಜೆ ಮೇಲೆ ಹೋಗಲಿದ್ದಾರೆ ಮತ್ತು ಅವರ ಕಡೆಯಿಂದ ತಪ್ಪು ನಡೆದಿದೆಯೇ ಎಂಬುದನ್ನು ತಿನಿಖೆ ನಡೆಸಿ ವರದಿಯನ್ನು ಸರ್ಕಾರಕ್ಕೆ ಕಳುಹಿಸುತ್ತೇವೆ ಎಂದು ಮಹಿಳಾ ಅಧಿಕಾರಿ ಹೇಳಿದ್ದಾರೆ.