Friday, April 19, 2024

ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿ ಮೇಲೆ ಹಲ್ಲೆಗೆ ಕುಮಾರಸ್ವಾಮಿ ಖಂಡನೆ

ಬೆಂಗಳೂರು; ಬೆಳಗಾವಿಯ ತಿಲಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿ ಮೇಲೆ ನಡೆದಿರುವ ಹಲ್ಲೆಯನ್ನು ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಈ ಬಗ್ಗೆ ಇಂದು ಸರಣಿ ಟ್ವೀಟ್​ ಮಾಡಿದ ಹೆಚ್​ಡಿಕೆ, ಕನ್ನಡ ಭಾವುಟ ತನ್ನ ಮೇಲೆ ಹಾಕಿಕೊಂಡು ಡ್ಯಾನ್ಸ್​​ ಮಾಡುತ್ತಿದ್ದ ವೇಳೆಯಲ್ಲಿ ಕೆಲವು ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ದೂರು ಕೊಡಲು ಹೋದ ಆ ವಿದ್ಯಾರ್ಥಿ ಮೇಲೆ ಪೊಲೀಸರು ಕೂಡ ಅಮಾನುಷವಾಗಿ ಹಲ್ಲೆ ನಡೆಸಿರುವುದು ಕನ್ನಡಕ್ಕೆ, ಕರ್ನಾಟಕಕ್ಕೆ ಬಗೆದ ದೊಡ್ಡ ದ್ರೋಹ ಎಂದು ಕಿಡಿಕಾರಿದರು.

ಡಿಸಿಪಿ ಹಾಗೂ ಎಸಿಪಿ ಮಟ್ಟದ ಅಧಿಕಾರಿಗಳು ಇಬ್ಬರು ಬಾಲಕನ ವಿಷಯದಲ್ಲಿ ಕ್ರೂರವಾಗಿ ವರ್ತಿಸಿ ದರ್ಪ ತೋರಿಸಿರುವುದು ಸರಿಯಲ್ಲ. ಡಿಸಿಪಿ ಅಧಿಕಾರಿ ಆ ಬಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಪಾಳಮೋಕ್ಷ ಮಾಡಿ, ಬೂಟು ಕಾಲಿನಿಂದ ಒದ್ದಿರುವುದು ಅಕ್ಷಮ್ಯ ಹಾಗೂ ಅನಾಗರಿಕ ವರ್ತನೆ. ಈ ಪ್ರಕರಣವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕು.

ತಕ್ಷಣವೇ ಬಾಲಕನ ಮೇಲೆ ಹಲ್ಲೆ ನಡೆಸಿದ ಇತರೆ ಬಾಲಕರನ್ನು ವಶಕ್ಕೆ ಪಡೆದು, ಅವರಿಗೆ ಚಿತಾವಣೆ ನೀಡಿದವರನ್ನು ಬಂಧಿಸಬೇಕು ಹಾಗೂ ಕನ್ನಡ ಬಾವುಟ ಹಾರಿಸಿದ ಬಾಲಕನ ಮೇಲೆ ದುಂಡಾವರ್ತನೆ ತೋರಿದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಕುಮಾರಸ್ವಾಮಿ ಅವರು ಆಗ್ರಹಿಸಿದರು.

RELATED ARTICLES

Related Articles

TRENDING ARTICLES