ಭಾರತ– ಅಮೇರಿಕ ಸೇನಾ ಪಡೆಗಳು ವಾಸ್ತವ ನಿಯಂತ್ರಣ ರೇಖೆ ಸಮೀಪ ನಡೆಸುತ್ತಿರುವ ಜಂಟಿ ಸಮರಾಭ್ಯಾಸವನ್ನು ಚೀನಾ ವಿರೋಧಿಸಿದೆ.
ಇದು ನವದೆಹಲಿ ಮತ್ತು ಬೀಜಿಂಗ್ ನಡುವೆ ಉಭಯ ರಾಷ್ಟ್ರಗಳ ಗಡಿ ಸಮಸ್ಯೆ ಸಂಬಂಧ ನಡೆದಿರುವ ಒಪ್ಪಂದಗಳ ಆಶಯವನ್ನು ಉಲ್ಲಂಘಿಸುತ್ತದೆ’ ಎಂದು ಚೀನಾ ಹೇಳಿದೆ.
ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜಹೋ ಲಿಜಿಯಾನ್ ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ಎಲ್‌ಎಸಿ ಬಳಿ ನಡೆಯುತ್ತಿರುವ ಜಂಟಿ ಸೇನಾ ತಾಲೀಮು 1993 ಮತ್ತು 1996ರಲ್ಲಿ ಚೀನಾ– ಭಾರತದ ನಡುವೆ ಆಗಿರುವ ಒಪ್ಪಂದದ ಆಶಯಗಳನ್ನು ಉಲ್ಲಂಘಿಸುತ್ತದೆ’ ಎಂದಿದ್ದಾರೆ. ಭಾರತ– ಅಮೆರಿಕ ಜಂಟಿ ಸೇನಾ ತಾಲೀಮಿನ 18ನೇ ಆವೃತ್ತಿ ‘ಯುದ್ಧ್ ಅಭ್ಯಾಸ್’ ಉತ್ತರಾಖಂಡದಿಂದ ಸುಮಾರು 100 ಕಿ.ಮೀ ದೂರದಲ್ಲಿ ವಾಸ್ತವ ನಿಯಂತ್ರಣ ರೇಖೆ ಬಳಿ ಬುಧವಾರ ಆರಂಭವಾಗಿದೆ.
ಎರಡು ವಾರಗಳ ಅವಧಿಯ ಈ ತಾಲೀಮು, ಪರಸ್ಪರರ ಮಿಲಿಟರಿ ಉಪಕರಣಗಳು ಅಥವಾ ಪಡೆಗಳೊಂದಿಗೆ ಸಮನ್ವಯದಿಂದ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೆಚ್ಚಿಸುವ, ಕಾರ್ಯತಂತ್ರ ವಿನಿಯಮ ಮತ್ತು ಶಾಂತಿಪಾಲನೆ ಹಾಗೂ ಪ್ರಕೃತಿ ವಿಪತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಉಭಯ ಸೇನೆಗಳ ನಡುವೆ ಪರಿಣತಿ ಹಂಚಿಕೊಳ್ಳುವ ಗುರಿ ಹೊಂದಿದೆ.