ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಮತದಾರರ ಮಾಹಿತಿ ಕಳವು ಪ್ರಕರಣದ್ದೇ ಸದ್ದು. ಮತದಾರರ ವೈಯಕ್ತಿಕ ಮಾಹಿತಿ ಕಲೆ ಹಾಕುವಂತೆ ಬಿಬಿಎಂಪಿಯೇ ಆದೇಶ ನೀಡಿದ್ದು, ಇದ್ರ ಹಿಂದೆ ಸರ್ಕಾರ ಏನೋ ಹುನ್ನಾರ ಮಾಡಿದೆ ಅನ್ನೋ ಅನುಮಾನಗಳು ಕಾಡ್ತಾ ಇವೆ. ಎಸ್ಕೇಪ್ ಆಗಿದ್ದ ಸಚಿವ ಅಶ್ವಥ್ ನಾರಾಯಣ್ ಆಪ್ತ ಹಾಗೂ ಚಿಲುಮೆ ಸಂಸ್ಥೆ ಮುಖ್ಯಸ್ಥ ಕೃಷ್ಣಪ್ಪ ರವಿಕುಮಾರ್ ಹಾಗೂ ಪತ್ನಿ ಐಶ್ವರ್ಯಾ ಪೊಲೀಸ್ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಜೊತೆಗೆ ಕೆಲವು ನಕಲಿ ಬಿಎಲ್‌ಓಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸ್ತಾ ಇದ್ದಾರೆ. ಮತದಾರರ ಡೇಟಾ ಸಂಗ್ರಹಿಸಿ ಕೋಟಿ ಕೋಟಿ ಲೂಟಿ ಹೊಡೆಯೋ ಪ್ಲ್ಯಾನ್ ಇವರದ್ದಾಗಿತ್ತಾ ಅನ್ನೋ ಅನುಮಾನ ಕಾಡ್ತಾ ಇದೆ. ಜೊತೆಗೆ ಬೆಂಗಳೂರಿನ ಹಲವು ವಾರ್ಡ್‌ಗಳ ವೋಟರ್ ಲಿಸ್ಟ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಹೆಸರುಗಳೇ ಮಂಗಮಾಯ ಆಗಿಬಿಟ್ಟಿವೆ. ಸತ್ತವರ ಹೆಸರು ವೋಟರ್ ಲಿಸ್ಟ್‌ನಲ್ಲಿ ಜೀವಂತವಾಗಿದ್ದು, ಬದುಕಿರುವವರ ಹೆಸರುಗಳೇ ಕಣ್ಮರೆಯಾಗಿವೆ. ಈ ಮೂಲಕ ಚುನಾವಣಾ ಅಕ್ರಮ ನಡೆಸೋದಕ್ಕೆ ಬಿಜೆಪಿ ನಾಯಕರು ಮುಂದಾಗಿದ್ದಾರೆ. ಇದೊಂದು ವೋಟರ್ ಗೇಟ್ ಸ್ಕ್ಯಾಮ್ ಅಂತಾ ಕಾಂಗ್ರೆಸ್ ನಾಯಕರು ದೂರಿದ್ದಾರೆ.
ಚಿಲುಮೆ ಸಂಸ್ಥೆಯಲ್ಲಿ ನೋಟು ಎಣಿಕೆ ಮೆಶಿನ್, ಸಚಿವ ಅಶ್ವಥ್ ನಾರಾಯಣ್ ಅವ್ರ ಲೆಟರ್ ಹೆಡ್‌ಗಳು, ಖಾಲಿ ಚೆಕ್‌ಗಳು ಸಿಕ್ಕಿವೆ. ಪ್ರಕರಣದಲ್ಲಿ ಸಿಎಂ ಬೊಮ್ಮಾಯಿ ಅವ್ರೇ ರಿಯಲ್ ಕಿಂಗ್ ಪಿನ್. ಕೂಡಲೇ ರಾಜೀನಾಮೆ ಕೊಡಬೇಕು ಅಂತಾ ರಾಜ್ಯ ಕಾಂಗ್ರೆಸ್ ನಾಯಕರು ಆಗ್ರಹಿಸಿದ್ರು. ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ದೂರನ್ನೂ ಸಲ್ಲಿಸಿದ್ರು. ಕೂಡಲೇ ಇವ್ರು ಮಾಡಿರೋ ಮತಪಟ್ಟಿ ಪರಿಷ್ಕರಣೆಯನ್ನ ರದ್ದು ಮಾಡಬೇಕು. ಸಿಎಂ ಬೊಮ್ಮಾಯಿ ಹಾಗೂ ಸಂಬಂಧಪಟ್ಟ ಸಚಿವರು, ಶಾಸಕರ ಮೇಲೆ ಎಫ್ ಐಆರ್ ದಾಖಲಿಸಬೇಕು ಅಂತಾ ಆಗ್ರಹಿಸಿದ್ರು. ಮತದಾರರ ಪಟ್ಟಿಯಲ್ಲಿ ಗೋಲ್ಮಾಲ್ನಲ್ಲಿ ಸಚಿವರ ಪಾತ್ರವಿದೆ ಎಂದು ಕೋಲಾರದಲ್ಲಿ ಬಿಜೆಪಿ ವಿರುದ್ಧ H.D.ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ.
ಚುನಾವಣಾ ಆಯೋಗದಲ್ಲಿ ರಾಜಕೀಯ ಪಕ್ಷಗಳಿಗೆ ಬಿಎಲ್ಓ ನೇಮಕಕ್ಕೆ ಅವಕಾಶ ಇದೆ. ವೋಟರ್ಸ್‌ಗಳನ್ನು ಸೇರಿಸಲು, ಡಿಲೀಟ್ ಮಾಡಲು ನಮಗೆ ಅವಕಾಶ ಇಲ್ಲ. ಬಾಡಿಗೆಗೆ ಜನ ಬೇಕಾಗೋದು ಕಾಂಗ್ರೆಸ್ ಪಕ್ಷಕ್ಕೆ, ಅದು ಕಾರ್ಯಕರ್ತರಿಲ್ಲದ ಪಕ್ಷ ಎಂದು ವಿಪಕ್ಷ ನಾಯಕರ ಏಟಿಗೆ ಸಚಿವ ಅಶ್ವತ್ಥ್ ನಾರಾಯಣ ತಿರುಗೇಟು ನೀಡಿದ್ದಾರೆ.
ಇತ್ತ, ಕಾಂಗ್ರೆಸ್ ದೂರಿನ ಬೆನ್ನಲ್ಲೇ ಬಿಜೆಪಿಯಿಂದಲೂ ದೂರು ದಾಖಲಾಗಿದೆ. MLC ಚಲವಾದಿ ನಾರಾಯಣಸ್ವಾಮಿ, ಬೆಂ.ಉತ್ತರ ಜಿಲ್ಲೆ ಬಿಜೆಪಿ ಅಧ್ಯಕ್ಷ ಮಂಜುನಾಥ್,ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಅಧ್ಯಕ್ಷ ನಾರಾಯಣ್‌ರಿಂದ ದೂರು ನೀಡಲಾಗಿದೆ. ಸಿದ್ದರಾಮಯ್ಯ ಕಾಲದ ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ ವಿರುದ್ಧ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾಗೆ ಮನವಿ ಮಾಡಿದ್ರು.
ಒಟ್ನಲ್ಲಿ ಚಿಲುಮೆ ಸಂಸ್ಥೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮತದಾರರ ಮಾಹಿತಿ ಕಲೆ ಹಾಕಿರೋದನ್ನ ನೋಡ್ತಿದ್ರೆ ಹಲವಾರು ಸಂಶಯಗಳು ಮೂಡದೇ ಇರೋದಿಲ್ಲ. ಮಂತ್ರಿ, ಶಾಸಕರೂ ಚಿಲುಮೆ ಸಂಸ್ಥೆಗೆ ಲಕ್ಷಾಂತರ ರೂಪಾಯಿ ಹಣ ದೇಣಿಗೆ ಕೊಟ್ಟಿದ್ದೇಕೆ ಅನ್ನೋ ಪ್ರಶ್ನೆಯೂ ಕಾಡ್ತಿದೆ. ಸದ್ಯ ಈ ಪ್ರಕರಣವನ್ನ ಚುನಾವಣಾ ಆಯೋಗ ಕೂಡ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣ ನ್ಯಾಯಾಂಗ ತನಿಖೆ ಮೆಟ್ಟಿಲೇರಿದ್ರೆ ಸರ್ಕಾರವೇ ಉರುಳಿ ಬೀಳುತ್ತೆ ಅಂತಾ ಹೇಳಲಾಗ್ತಿದೆ.
ಆನಂದ್ ನಂದಗುಡಿ ಸ್ಪೆಶಲ್ ಕರೆಸ್ಪಾಂಡೆಂಟ್ ಪವರ್ ಟಿವಿ