Friday, September 20, 2024

ಕೊರಗಜ್ಜನ ಮಹಿಮೆಗೆ ಮಾರು ಹೋದ ಉಕ್ರೇನ್ ದಂಪತಿ

ಮಂಗಳೂರು: ವಿದೇಶದಿಂದ ಬಂದಿದ್ದ ಎಂಟು ವರ್ಷದ ಮಗುವಿಗೆ ವಿಪರೀತ ಅನ್ನುವಷ್ಟು ಮಧುಮೇಹದ ಕಾಯಿಲೆ ಇತ್ತು. ಜೀವನ ಪೂರ್ತಿ ಇನ್ಸುಲಿನ್ ಇಂಜೆಕ್ಷನ್ ಕೊಡುವುದಷ್ಟೇ ಪರ್ಯಾಯ ಅನ್ನುವುದು ಆಧುನಿಕ ವೈದ್ಯರ ಮಾತಾಗಿತ್ತು. ಆದರೆ ದೂರದ ಉಕ್ರೇನ್ ದೇಶದಿಂದ ಮಂಗಳೂರಿಗೆ ಬಂದಿದ್ದ ದಂಪತಿಯ ಎಂಟು ವರ್ಷದ ಮಗು ಕೇವಲ ಮೂರೂವರೆ ತಿಂಗಳಲ್ಲಿ ಸಕ್ಕರೆ ಕಾಯಿಲೆಯಿಂದ ಪಾರಾಗಿ ಬಂದಿದೆ. ಇದಕ್ಕೆ ಕಾರಣವಾಗಿದ್ದು ಕೊರಗಜ್ಜನ ಪವಾಡ ಎನ್ನುವ ಮಾತು ಕೇಳಿಬಂದಿದೆ.

ಉಕ್ರೇನ್ ದೇಶದ ಪ್ರಜೆಗಳಾದ ಆಂಡ್ರ್ಯೂ ಮತ್ತವರ ಪತ್ನಿ ಎಲೆನಾ ಅವರ ಎಂಟು ವರ್ಷದ ಮಗು ಮ್ಯಾಕ್ಸಿಂ ತೀವ್ರತರ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ. ಮಗುವಿಗೆ ಆಧುನಿಕ ಅಲೋಪತಿ ಚಿಕಿತ್ಸೆಯಲ್ಲಿ ಇನ್ಸುಲಿನ್ ಇಂಜೆಕ್ಷನ್ ನೀಡುವುದಷ್ಟೇ ಪರ್ಯಾಯ ಅನ್ನುವುದು ವೈದ್ಯರ ವಾದವಾಗಿತ್ತು. ಇದೇ ವೇಳೆ, ಇಸ್ಕಾನ್ ಭಕ್ತ ಭಕ್ತಿಭೂಷಣದಾಸ್ ಗುರೂಜಿ ಈ ರೋಗಕ್ಕೆ ಆಯುರ್ವೇದ ಔಷಧಿ ನೀಡುತ್ತಾರೆಂದು ತಿಳಿದ ಕುಟುಂಬ ಗುರೂಜಿಯನ್ನು ಹುಡುಕಿಕೊಂಡು ಬಂದಿತ್ತು. ಮಂಗಳೂರು ಹೊರವಲಯದ ಫರಂಗಿಪೇಟೆ ಬಳಿಯ ಕುಮ್ಡೇಲುವಿನಲ್ಲಿ ಗೋಶಾಲೆ ನಿರ್ಮಿಸಿ, ಉಳಿದುಕೊಂಡಿರುವ ಗುರೂಜಿ ಬಳಿ ದಂಪತಿ ಚಿಕಿತ್ಸೆ ಪಡೆಯುತ್ತಿದ್ದರು.

ಇಂಥ ಸಂದರ್ಭದಲ್ಲಿಯೇ ಅಲ್ಲಿನ ಜನ ನಂಬುತ್ತಿದ್ದ ಕೊರಗಜ್ಜನಿಗೆ ಗುರೂಜಿ ಸಲಹೆಯಂತೆ ಹರಕೆ ಹೇಳಿಕೊಂಡಿದ್ದರು. ದೈವದ ಬಗ್ಗೆ ಗಂಧಗಾಳಿ ಗೊತ್ತಿಲ್ಲದ ವಿದೇಶಿ ದಂಪತಿಯಾಗಿದ್ದರೂ ಮಗುವಿನ ರೋಗ ವಾಸಿಯಾದಲ್ಲಿ ಅಗೇಲು ಸೇವೆ ನೀಡುವ ಹರಕೆ ಹೊತ್ತಿತ್ತು.

ಕೋಲದ ಸಂದರ್ಭದಲ್ಲಿ ವೀಳ್ಯದೆಲೆಯ ಪ್ರಸಾದವನ್ನು ವಿದೇಶಿ ದಂಪತಿಗೆ ಕೊಟ್ಟಿದ್ದ ಕೊರಗಜ್ಜ, 21 ದಿನದ ಒಳಗೆ ರೋಗ ವಾಸಿ ಮಾಡಿಸುತ್ತೇನೆ ಎಂದು ಅಭಯ ನೀಡಿತ್ತು. ಕೊರಗಜ್ಜನ ಪವಾಡವೋ ಎನ್ನುವಂತೆ ಕೃಶಕಾಯ ಆಗಿದ್ದ ಎಂಟು ವರ್ಷದ ಮಗು ಮ್ಯಾಕ್ಸಿಂ ದಿನ ಕಳೆದಂತೆ ಹುಷಾರಾಗಿದ್ದಾನೆ. 500 ಪಾಯಿಂಟ್ ಮೇಲಿದ್ದ ಸಕ್ಕರೆ ಪ್ರಮಾಣ ಇಳಿಕೆಯಾಗುತ್ತಾ ಬಂದಿತ್ತು. ಮೂರು ತಿಂಗಳಲ್ಲಿ ಸಕ್ಕರೆ ಪ್ರಮಾಣ ನೂರರ ಒಳಗೆ ಬಂದಿದ್ದು, ಸಾಮಾನ್ಯ ಮಕ್ಕಳಂತೆ ಚುರುಕಾಗಿದ್ದಾನೆ. ಹಿಂದೆ ಇನ್ಸುಲಿನ್ ಇಲ್ಲದಿದ್ದರೆ, ಎದ್ದು ನಡೆಯಲು ಸಾಧ್ಯವಾಗದೇ ಇದ್ದ ಮಗು ಆಟ ಆಡುತ್ತಿರುವುದನ್ನು ನೋಡಿ ತಾಯಿ ಎಲೆನಾ ತಮ್ಮ ಕಣ್ಣನ್ನು ನಂಬದಾಗಿದ್ದಾರೆ.

ಮಗು ಮ್ಯಾಕ್ಸಿಂ ಐದು ವರ್ಷದವನಿದ್ದಾಗ ಟೈಪ್ ವನ್ ಶುಗರ್ ಬಂದಿತ್ತು. ಆದರೆ ಎಲ್ಲಿ ಚಿಕಿತ್ಸೆ ನೀಡಿದರೂ ಸುಧಾರಣೆ ಆಗಿರಲಿಲ್ಲ. ಇಂಥ ಹೊತ್ತಲ್ಲೇ ಗುರೂಜಿ ಸಲಹೆಯಂತೆ ದೇಸಿ ಗಿಡ್ಡ ತಳಿ ಗೋವಿನ ಜೊತೆಗಿದ್ದು, ಚಿಕಿತ್ಸೆ ಪಡೆಯಲು ಮುಂದಾಗಿದ್ದರು. ಈ ಬಗ್ಗೆ ಗುರೂಜಿ ಬಳಿ ಕೇಳಿದಾಗ, ನಿಜಕ್ಕೂ ಕೊರಗಜ್ಜನ ಪವಾಡ ಎಂದಿದ್ದಾರೆ. ಸಣ್ಣ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ಕಾಯಿಲೆಗೆ ನಿರಂತರ ಚಿಕಿತ್ಸೆ ನೀಡಿದರೆ ಮಾತ್ರ ನಿಯಂತ್ರಣ ಸಾಧ್ಯ. ತುಳುನಾಡಿನ ದೈವದ ಕಾರಣಿಕದಲ್ಲಿ ಮಗು ಬಹುಬೇಗನೆ ಹುಷಾರಾಗಿದ್ದಾನೆ ಎಂದಿದ್ದಾರೆ.

ಗುರೂಜಿಯವರು ನಾಡಿ ಚಿಕಿತ್ಸೆ ಮತ್ತು ಆಯುರ್ವೇದ ಬಗ್ಗೆ ತಿಳಿದುಕೊಂಡಿದ್ದು, 30 ವರ್ಷಗಳ ಕಾಲ ಮಧ್ಯಪ್ರದೇಶದ ವೃಂದಾವನ ಮತ್ತು ಹಿಮಾಲಯದಲ್ಲಿದ್ದುಕೊಂಡು ಪ್ರಕೃತಿಯಲ್ಲೇ ಔಷಧಿ ಇರುವುದನ್ನು ಅರಿತುಕೊಂಡಿದ್ದಾರೆ. ಸದ್ಯಕ್ಕೆ ಊರೂರು ಹೋಗುತ್ತಾ ದೇಸಿ ಗಿಡ್ಡ ತಳಿ ಗೋವುಗಳ ಬಗ್ಗೆ ಪ್ರಚಾರ ಅಭಿಯಾನ ಕೈಗೊಂಡಿದ್ದಾರೆ. ಜೊತೆಗೆ, ನಾಡಿ ಚಿಕಿತ್ಸೆಯ ಬಗ್ಗೆಯೂ ಜಾಗೃತಿ ಮೂಡಿಸುತ್ತಿದ್ದಾರೆ.

ಕೊರಗಜ್ಜನ ಕಾರಣಿಕವೋ ಎನ್ನುವಂತೆ ವಿದೇಶಿ ದಂಪತಿಯ ಎಂಟು ವರ್ಷದ ಮಗು ಹುಷಾರಾಗಿದ್ದಾನೆ. ಇದಕ್ಕೆ ಪ್ರತಿಯಾಗಿ ಗುರೂಜಿ ಸಲಹೆಯಂತೆ, ಗೋಶಾಲೆಯಲ್ಲಿಯೇ ದಂಪತಿ ಹೆಸರಲ್ಲಿ ಕೊರಗಜ್ಜನಿಗೆ ಅಗೇಲು ಸೇವೆ ನೆರವೇರಿಸಿದ್ದಾರೆ. ಕಾಂತಾರ ಸಿನಿಮಾದ ಬಳಿಕ ಜಗತ್ತಿನಾದ್ಯಂತ ತುಳುನಾಡಿನ ದೈಗಳ ಮಹತ್ವ ಹರಡುತ್ತಿರುವಾಗಲೇ ಇಂಥ ವಿದ್ಯಮಾನ ನಡೆದಿರುವುದು ಸಹಜ ಕುತೂಹಲ ಮೂಡಿದೆ.

ಗಿರಿಧರ್ ಶೆಟ್ಟಿ ಪವರ್ ಟಿವಿ ಮಂಗಳೂರು

RELATED ARTICLES

Related Articles

TRENDING ARTICLES