ಕಾರವಾರ: ಅವರೆಲ್ಲ ತಮ್ಮ ಜೀವದ ಹಂಗನ್ನ ತೊರೆದು, ಸಮುದ್ರಕ್ಕೆ ಇಳಿದು ಮೀನುಗಾರಿಗೆ ಮಾಡುತ್ತಿದ್ದ ಕಡಲ ಮಕ್ಕಳು. ದೊಡ್ಡ ದೊಡ್ಡ ಬೋಟ್‌ಗಳನ್ನ ಹೊಂದದೆ ಚಿಕ್ಕ ನಾಡ ದೋಣಿಗಳಿಂದ ಸಾಂಪ್ರದಾಯಿಕ ಮೀನುಗಾರಿಕೆ ಮಾಡಿ ತಮ್ಮ ಜೀವನ ಸಾಗಿಸುತ್ತಿದ್ದವರು. ಆದರೆ ಕಳೆದ ಮೂರು ತಿಂಗಳಿನಿಂದ ದೋಣಿ ಚಲಾವಣೆ ಮಾಡಲು ಸೀಮೆಎಣ್ಣೆಯಿಲ್ಲದೆ ಮನೆಯಲ್ಲಿರುವ ಪರಿಸ್ಥಿತಿ ಬಂದಿದೆ. ಹೀಗಾಗಿ ಸಾಂಪ್ರದಾಯಿಕ ಮೀನುಗಾರರು ಸರ್ಕಾರ ವಿರುದ್ಧ ಕೇರಳಿ ಕೆಂಡವಾಗಿದ್ದಾರೆ.
ಹೌದು ಕರಾವಳಿ ಭಾಗದಲ್ಲಿ ಹೆಚ್ಚಿನ ಜನ್ರು ಮೀನುಗಾರಿಕೆಯನ್ನ ನಂಬಿಕೊಂಡೆ ಜೀವನ ಸಾಗಿಸ್ತಿದ್ದಾರೆ. ಅದರಲ್ಲೂ ಸಂಪ್ರದಾಯಿಕ ನಾಡ ದೋಣಿಗಳನ್ನ ಬಳಸಿ ನಿತ್ಯ ಮೀನುಗಾರಿಕೆ ಮಾಡಿ, ಬರುವ ಹಣದಲ್ಲಿ ತಮ್ಮ ಜೀವನ ಸಾಗಿಸುವವರೆ ಹೆಚ್ಚು. ಆದ್ರೆ ಕಳೆದ ಮೂರು ತಿಂಗಳಿನಿಂದ ಸರ್ಕಾರದಿಂದ ನಾಡ ದೋಣಿ ನಡಿಸಲು ಸೀಮೆಎಣ್ಣೆ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಸಂಪ್ರದಾಯಿಕ ಮೀನುಗಾರರು ತಮ್ಮ ಹೊಟ್ಟೆಗೆ ತಣ್ಣೀರಿನ ಬಟ್ಟೆ ಹಾಕಿಕೊಳ್ಳುವ ಪರಿಸ್ಥಿತಿ ಬಂದಿದೆ. ಇನ್ನು ಸೀಮೆಎಣ್ಣೆ ಪೂರೈಕೆ ಮಾಡಿ ಅಂತಾ ಸರ್ಕಾರಕ್ಕೆ ಮನವಿ ಮಾಡಿದ್ರು ಯಾರು ಕೂಡ ಸ್ಪಂದಿಸುತ್ತಿಲ್ಲ ಹೀಗಾಗಿ ಕೆರಳಿದ್ದಾರೆ. ಈ ಸರಕಾರದಿಂದ ಮೀನುಗಾರರಿಗೆ ಸೀಮೆಎಣ್ಣೆ ಪೊರೈಕೆ ಮಾಡಲು ಸಾಧ್ಯವಾಗದೆ ಇದ್ದರೆ ತೊಟ್ಟು ವಿಷವನ್ನ ಕೊಟ್ಟು ಬಿಡಿ ಅಂತಿದ್ದಾರೆ ಮೀನುಗಾರ ಮುಖಂಡರು.
ಇನ್ನು 2013ರ ಸರ್ಕಾರದ ಆದೇಶದಂತೆ ಪ್ರತಿ ನಾಡದೋಣಿಗೂ ಮಾಸಿಕ 300ಲೀಟರ್ ಸೀಮೆಎಣ್ಣೆ ಪೂರೈಕೆ ಮಾಡಬೇಕು ಆದ್ರೆ ಕಳೆದ ಅಗಸ್ಟ್ ತಿಂಗಳಿನಿಂದ ಸರ್ಕಾರ ಸೀಮೆಎಣ್ಣೆ ಪೂರೈಕೆ ಮಾಡುತ್ತಿಲ್ಲ, ಇದರಿಂದಾಗಿ ನಾಡದೋಣಿಗಳ ಮೂಲಕ ಮೀನುಗಾರಿಕೆ ಮಾಡುವವರು ನಿತ್ಯ ಕೆಲಸವಿಲ್ಲದೆ ಪರದಾಡುವ ಸ್ಥಿತಿಗೆ ಬಂದಿದ್ದಾರೆ. ಇನ್ನು ಸಂಪ್ರದಾಯಿಕ ಮೀನುಗಾರರಿಗೆ ಬೇರೆ ಆದಾಯದ ಮೂಲವಿಲ್ಲದೆ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಅದ್ರಲ್ಲು ನವೆಂಬರ್ ತಿಂಗಳಿನಿಂದ ಸಮುದ್ರದಲ್ಲಿ ಉತ್ತಮ ಮೀನು ಸಿಗುತ್ತೆ ಜೊತಗೆ ಮೀನುಗಾರಿಕೆಗೆ ಅನುಕೂಲರ ವಾತಾವರಣ ಇರುತ್ತೆ. ಈ ಸಂದರ್ಭದಲ್ಲಿ ಸೀಮೆಎಣ್ಣೆ ಇಲ್ಲದೆ ನಾಡದೋಣಿಗಳನ್ನ ಕಡಲತೀರದಲ್ಲಿ ನಿಲ್ಲಿಸುವುದು ನಮ್ಮ ವರ್ಷದ ಊಟಕ್ಕೆ ಮಣ್ಣು ಹಾಕಿಕೊಂಡಂತೆ ಎನ್ನುತ್ತಿದ್ದಾರೆ. ಶೀಘ್ರದಲ್ಲೇ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿದ ಬೇಕು ಇಲ್ಲವಾದಲ್ಲಿ ನಾವು ಬೀದಿಗಿಳಿದು ಉಗ್ರ ಹೋರಾಟ ಮಾಡುತ್ತೆವೆ ಎಂದು ಎಚ್ಚರಿಕೆ ನೀಡುತ್ತಿದ್ದಾರೆ.
ಒಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಪ್ರದಾಯಿಕ ಮೀನುಗಾರಿಕೆಯನ್ನ ಅವಲಂಬಿಸಿದ ಸುಮಾರು ಹತ್ತುಸಾವಿರ ಕುಟುಂಬಗಳು ಇವೆ. ಆದ್ರೆ ನಾಡದೋಣಿ ನಡೆಸಲು ಸೀಮೆಎಣ್ಣೆಯಿಲ್ಲದೆ ಮೀನುಗಾರ ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ಬಂದಿದೆ. ಇನ್ನಾದರು ಸರ್ಕಾರ ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಂಡು ಮೀನುಗಾರರ ಕಷ್ಟ ಬಗೆಹರಿಸಬೇಕಿದೆ.