Monday, December 23, 2024

ಅರ್ಥಪೂರ್ಣ ಕಾರ್ಯಕ್ರಮಕ್ಕೆ Jr NTR, ರೈ, ರಜನಿ ರಂಗು

ಉಸಿರು ನಿಂತರೂ ಹೆಸರು ಮಾತ್ರ ಅಚ್ಚಳಿಯದಂತೆ ಜನಮಾನಸದಲ್ಲಿ ಉಳಿಯಬೇಕು ಅಂದ್ರೆ, ಆ ವ್ಯಕ್ತಿಯ ವ್ಯಕ್ತಿತ್ವ ಆಕಾಶದಷ್ಟು ಅಗಲವಾಗಿರಬೇಕು. ಪೃಥ್ವಿಯಷ್ಟು ವಿಶಾಲವಾಗಿರಬೇಕು. ಹೃದಯದ ಬಡಿತದಂತೆ ಎಲ್ಲರ ಮನಸ್ಸು ಅವರಿಗಾಗಿ ಮಿಡಿಯಬೇಕು. ಅಂತಹ ವ್ಯಕ್ತಿತ್ವದ ಶಕ್ತಿ, ರಾಜರತ್ನ ಡಾ ಪುನೀತ್ ರಾಜ್​ಕುಮಾರ್. ಇವ್ರ ಸಾಮಾಜಿಕ ಕಾರ್ಯ ಹಾಗೂ ಸಿನಿಮಾ ಕ್ಷೇತ್ರದಲ್ಲಿನ ಸಾಧನೆ ಪರಿಗಣಿಸಿ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿದೆ. ರಾಜ್ಯೋತ್ಸವದಂದು ವಿಧಾನಸೌಧದಲ್ಲಿ ರಂಗೇರಲಿರೋ ಈ ಕಾರ್ಯಕ್ರಮ ಅವಿಸ್ಮರಣೀಯ ಹಾಗೂ ಅರ್ಥಪೂರ್ಣವಾಗಿರಲಿದೆ.

  • ರಾಜರತ್ನಗೆ ‘ಕರ್ನಾಟಕ ರತ್ನ’.. ಪ್ರಶಸ್ತಿ ಪ್ರದಾನಕ್ಕೆ ಕ್ಷಣಗಣನೆ

ಸಿಂಹದ ಮರಿ ಘರ್ಜನೆ ಮಾಡ್ತಾ ಇದೆ. ಇನ್ನೂ ಏನೇನು ಮಾಡುತ್ತೋ ಅಂತ ನನಗೆ ಈಗಲೇ ಅನಿಸ್ತಿದೆ. ನಾವೆಲ್ಲಾ 70-80 ಚಿತ್ರಗಳನ್ನ ಮಾಡಿದ ಬಳಿಕ ನಮಗೊಂದು ಮೆಚ್ಯುರಿಟಿ ಲೆವೆಲ್ ಬಂತು. ಚೊಚ್ಚಲ ಚಿತ್ರದಲ್ಲೇ ಅಂತರಂಗದ ನಟನೆ ನೀಡಿದ್ದಾರೆ ಅಪ್ಪು. Long Way to go Appu. ಹೀಗಂತ ಸೂಪರ್ ಸ್ಟಾರ್ ರಜನಿಕಾಂತ್ 2002ರಲ್ಲಿ ಅಪ್ಪು ಚಿತ್ರದ ಶತದಿನೋತ್ಸವ ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್​ಕುಮಾರ್​ರನ್ನ ಕೊಂಡಾಡಿದ್ರು.

ಅಷ್ಟೇ ಅಲ್ಲ ನಟಸಾರ್ವಭೌಮ ಡಾ. ರಾಜ್​ಕುಮಾರ್ ಹಾಗೂ ಪಾರ್ವತಮ್ಮ ಜೊತೆಗೂಡಿ ಬೆಳ್ಳಿ ಕಿರೀಟ ಕೂಡ ತೊಡಿಸಿದ್ರು. ಇದೀಗ ಅದೇ ಪುನೀತ್ ರಾಜ್​ಕುಮಾರ್​ಗೆ ಬರೋಬ್ಬರಿ ಎರಡು ದಶಕಗಳ ನಂತ್ರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡೋಕೆ ಅಂತ ಅದೇ ರಜನೀಕಾಂತ್ ಕರುನಾಡಿಗೆ ಮುಖ್ಯ ಅತಿಥಿಯಾಗಿ ಬರ್ತಿದ್ದಾರೆ. ಆದ್ರೆ ಇಂದು ಪುನೀತ್ ಜೀವಂತವಾಗಿಲ್ಲ ಅನ್ನೋದು ನೋವಿನ ಸಂಗತಿ.

ಅಕ್ಟೋಬರ್ 29, 2021ರಂದು ನಟ ಪುನೀತ್ ರಾಜ್​ಕುಮಾರ್​ಗೆ ಹೃದಯಾಘಾತವಾಗಿ ಆಸ್ಪತ್ರೆ ಸೇರಿದ್ರು. ಕೆಲವೇ ಕ್ಷಣಗಳಲ್ಲಿ ಅಪ್ಪು ಇನ್ನಿಲ್ಲ ಅನ್ನೋ ಸುದ್ದಿ ಬರಸಿಡಿಲು ಬಡಿದಂತೆ ಜಗಜ್ಜಾಹಿರಾಯ್ತು. ಕಾನೂನು ಸುವ್ಯವಸ್ಥೆ ಕಾಪಾಡೋದ್ರ ಜೊತೆಗೆ ಅಪ್ಪು ಪಾರ್ಥಿವ ಶರೀರದ ಅಂತಿಮ ದರ್ಶನ, ಅಂತ್ಯಕ್ರಿಯೆ ಸೇರಿದಂತೆ ಎಲ್ಲವೂ ವ್ಯವಸ್ಥಿತವಾಗಿ ಮಾಡಿದ್ದು ಸರ್ಕಾರ. ಯೆಸ್.. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವ್ರು, ಡಾ. ರಾಜ್ ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ, ಎಲ್ಲವನ್ನೂ ಸುಸೂತ್ರವಾಗಿ ಮಾಡಿಕೊಟ್ಟರು.

ಅಪ್ಪು ಹಣೆಗೆ ಮುತ್ತಿಟ್ಟು, ಹೋಗಿ ಬಾ ಅಪ್ಪು ಅಂತ ಸಿಎಂ ಬೊಮ್ಮಾಯಿ ನೀಡಿದ ಆ ಭಾವನಾತ್ಮಕ ಬೀಳ್ಕೊಡುಗೆ ನಿಜಕ್ಕೂ ಕಣ್ಣಲ್ಲಿ ನೀರು ತರಿಸಿತ್ತು. ಅಷ್ಟೇ ಅಲ್ಲ, ಅಣ್ಣಾವ್ರ ಕುಟುಂಬದ ಜೊತೆ ಒಬ್ಬ ಹಿರಿಯಣ್ಣನಂತೆ ನಿಂತು, ಅವ್ರ ಮನೋಬಲವನ್ನು ಹೆಚ್ಚಿಸೋ ಕಾರ್ಯ ಮಾಡಿದ್ರು. ನಂತ್ರ ಅಪ್ಪು ಮಾಡಿದ ಸಾಮಾಜಿಕ ಕಾರ್ಯಗಳು ಹಾಗೂ ಸಿನಿಮಾ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನ ಪರಿಗಣಿಸಿ, ಕರ್ನಾಟಕ ರತ್ನ ಪ್ರಶಸ್ತಿ ಅನೌನ್ಸ್ ಮಾಡಿದ್ರು ಸಿಎಂ ಬೊಮ್ಮಾಯಿ.

  • ದಶಕದ ನಂತ್ರ ಸರ್ಕಾರದಿಂದ ರಾಜ್ಯದ ಸರ್ವೋಚ್ಚ ನಾಗರಿಕ ಪ್ರಶಸ್ತಿ
  • ವಿಧಾನಸೌಧದ ಮೆಟ್ಟಿಲುಗಳ ಮೇಲೆ ಅವಿಸ್ಮರಣೀಯ ಗಳಿಗೆಗೆ ಸಿದ್ಧತೆ
  • ಪ್ರಶಸ್ತಿಯ ಮೌಲ್ಯವೇನು..? ನೀಡಲು ಮಾನದಂಡಗಳೇನು..?

ಹೌದು.. ಕರ್ನಾಟಕ ರತ್ನ ಭಾರತರತ್ನದಂತೆ ನಮ್ಮ ರಾಜ್ಯದ ಮಟ್ಟಿಗೆ ಸರ್ವೋಚ್ಚ ನಾಗರಿಕ ಪ್ರಶಸ್ತಿ. ರಾಜ್ಯ ಸರ್ಕಾರ ನೀಡೋ ಈ ಪ್ರಶಸ್ತಿ ಇಲ್ಲಿಯವರೆಗೆ ಒಂಬತ್ತು ಮಂದಿಗೆ ಸಂದಿದೆ. 1992ರಲ್ಲಿ ಮೊದಲ ಬಾರಿಗೆ ಡಾ. ರಾಜ್​ಕುಮಾರ್ ಹಾಗೂ ರಾಷ್ಟ್ರಕವಿ ಕುವೆಂಪುಗೆ ಸಿನಿಮಾ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗೆ ನೀಡಲಾಗಿತ್ತು. ಅಲ್ಲಿಂದ ಶುರುವಾಗಿ ವೀರೇಂದ್ರ ಹೆಗ್ಡೆವರೆಗೂ ಒಂಬತ್ತು ಮಂದಿ ಕರ್ನಾಟಕ ರತ್ನ ಸ್ವೀಕರಿಸಿದ್ದಾರೆ. 2009ರ ನಂತ್ರ ಬರೋಬ್ಬರಿ 13 ವರ್ಷಗಳಾದ್ಮೇಲೆ ಇದೀಗ ಸರ್ಕಾರ ರಾಜರತ್ನ ಅಪ್ಪುಗೆ ಪ್ರಶಸ್ತಿ ನೀಡ್ತಿರೋದು ಸಮಸ್ತ ಕರುನಾಡಿನ ಜನತೆಗೆ ಖುಷಿ ತಂದಿದೆ.

ಕನ್ನಡ ರಾಜ್ಯೋತ್ಸವ ವಿಶೇಷ, ನವೆಂಬರ್ 1ರಂದು ವಿಧಾನಸೌಧದ ಮೆಟ್ಟಿಲುಗಳ ಮೇಲೆ ದಿವಂಗತ ಪುನೀತ್ ರಾಜ್​ಕುಮಾರ್​ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಅದೊಂದು ಅವಿಸ್ಮರಣೀಯ ಹಾಗೂ ಅರ್ಥಪೂರ್ಣ ಕಾರ್ಯಕ್ರಮವಾಗಿಸಲು ಸರ್ಕಾರ ನಿರ್ಧರಿಸಿದ್ದು, ಸೂಪರ್ ಸ್ಟಾರ್ ರಜನಿಕಾಂತ್, ಟಾಲಿವುಡ್ ಸೆನ್ಸೇಷನ್ ಜೂ. ಎನ್​ಟಿಆರ್, ಬಾಲಿವುಡ್​ ಚೆಲುವೆ ಐಶ್ವರ್ಯಾ ರೈ, ಸುಧಾಮೂರ್ತಿ ಅವ್ರಿಗೆ ಆಮಂತ್ರಣ ನೀಡಲಾಗಿದೆ. ಅವ್ರೆಲ್ಲಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಉತ್ಸುಕರಾಗಿದ್ದು, ಸ್ಟಾರ್ ಅಟ್ರ್ಯಾಕ್ಷನ್​ನಿಂದ ರಂಗೇರಲಿದೆ ಫಂಕ್ಷನ್.

ಕಂದಾಯ ಸಚಿವ ಆರ್ ಅಶೋಕ್ ಹೇಳಿದಂತೆ, ಕರ್ನಾಟಕ ರತ್ನ ಪ್ರಶಸ್ತಿಯು  ಬೆಳ್ಳಿ ಫಲಕ ಜತೆಗೆ 50 ಗ್ರಾಂ ಚಿನ್ನದ ಪದಕವೂ ಇರಲಿದೆಯಂತೆ.  ಇನ್ನು ಅಶ್ವಿನಿ ಪುನೀತ್ ರಾಜ್​ಕುಮಾರ್​ರಿಗೆ ಅಪ್ಪು ಪರವಾಗಿ ಶಾಲು ಹೊದಿಸಿ  ಪ್ರಶಸ್ತಿ  ಪ್ರದಾನ ಮಾಡಲಾಗುತ್ತೆ. ನಟ ಶಿವರಾಜ್​ಕುಮಾರ್, ರಾಘವೇಂದ್ರ ರಾಜ್​ಕುಮಾರ್ ಸೇರಿದಂತೆ ಇಡೀ ರಾಜ್ ಕುಟುಂಬ ಹಾಗೂ ಲಕ್ಷಾಂತರ ಮಂದಿ ಕಲಾಭಿಮಾನಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿ ಆಗಲಿದ್ದಾರೆ.

ಇಷ್ಟಕ್ಕೂ ಪುನೀತ್ ರಾಜ್​ಕುಮಾರ್​ಗೆ ಕರ್ನಾಟಕ ರತ್ನ ನೀಡಲು ಕಾರಣವೇನು ಅನ್ನೋದು ಹಲವರ ಪ್ರಶ್ನೆ. ಅದಕ್ಕೆ ಉತ್ತರ ಅವ್ರ ಸಾಮಾಜಿಕ ಕಾರ್ಯಗಳು. ಬಲಗೈಯಲ್ಲಿ ನೀಡಿದ್ದು ಎಡಗೈಗೂ ಗೊತ್ತಾಗದಂತೆ ಗೌಪ್ಯತೆ ಕಾಪಾಡಿಕೊಂಡ ಅವ್ರ ಹೃದಯ ಶ್ರೀಮಂತಿಕೆ ಪ್ರತೀಕವದು. ಸಾಕಷ್ಟು ಮಂದಿ ಅಸಹಾಯಕರು, ಬಡವರು, ಅಭಿಮಾನಿಗಳು ಹಾಗೂ ಅನಾಥಾಶ್ರಮಗಳಿಗೆ ಅವ್ರು ನೀಡಿರೋ ದಾನ, ಧರ್ಮಗಳೇ ಕರ್ನಾಟಕ ರತ್ನಕ್ಕೆ ಸ್ಫೂರ್ತಿ. ಬಾಲ್ಯದಲ್ಲೇ ನ್ಯಾಷನಲ್ ಅವಾರ್ಡ್​ ಪಡೆದ ಅಪ್ಪು, ಸೂಪರ್ ಸ್ಟಾರ್ ಆಗಿ ಮಿಂಚಿದ್ರು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES