Monday, December 23, 2024

ಅಪ್ಪುಗಾಗಿ ಪುರಿ, ಬತ್ತಾಸ್​ನಲ್ಲಿ ಹಾರ ಪೋಣಿಸಿ ತಂದ ಅಜ್ಜಿ

ಬೆಂಗಳೂರು: ಸೂರ್ಯನೊಬ್ಬ.. ಚಂದ್ರನೊಬ್ಬ.. ಈ ರಾಜನೂ ಒಬ್ಬ. ಹೌದು.. ಅಪ್ಪು ಅಂತಹ ವ್ಯಕ್ತಿ ಹಾಗೂ ವ್ಯಕ್ತಿತ್ವಗಳು ಹುಟ್ಟೋದು ಅಪರೂಪದಲ್ಲಿ ಅಪರೂಪ. ದೇವರಂತೆ ಪೂಜಿಸಲ್ಪಡೋ ದೇವತಾ ಮನುಷ್ಯನ ಪುತ್ರನೂ ದೇವರಾಗಿರೋದು ಇಂಟರೆಸ್ಟಿಂಗ್.

ಬೆಟ್ಟದ ಹೂವಿನ ಪಯಣ ಗಂಧದಗುಡಿಯವರೆಗೂ ಸಾಗಿದ ಪರಿ ಅದ್ಭುತ, ಅವರ್ಣನೀಯ. ರಾಜನ ಮಗನಾಗಿ ಹುಟ್ಟಿ, ರಾಜಯೋಗದಲ್ಲಿ ರಾಜ ಕಳೆಯೊಂದಿಗೆ ರಾಜನಂತೆ ಬದುಕಿ ಬಾಳಿದವರು ಅಪ್ಪು. ಅವ್ರ ಆ ನಗುವಿನಂತೆ ಮುಖದ ಕಳೆ ಎಂದೂ ಕುಂದಲೇ ಇಲ್ಲ. ಅಂತಹ ಅಜಾತಶತ್ರು ಅಪ್ಪುಗೆ ಇಡೀ ಕರುನಾಡೇ ಅಭಿಮಾನದ ಹೊಳೆ ಹರಿಸಿ, ಹೂಮಳೆ ಸುರಿಸಿದೆ.

ಪ್ರತೀ ದಿನ ಧರ್ಮಸ್ಥಳ, ಮಂಜುನಾಥ ಸ್ವಾಮಿಯ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತು ಸಮಾಧಿಯ ದರ್ಶನ ಪಡೆದು ಪುನೀತರಾಗ್ತಿದ್ದಾರೆ. ಅದ್ರಲ್ಲೂ ಪುಣ್ಯಸ್ಮರಣೆ ವಿಶೇಷ ಲಕ್ಷಾಂತರ ಮಂದಿ ಸ್ಮಾರಕಕ್ಕೆ ಭೇಟಿ ನೀಡಿದ್ದು, ಎಲ್ಲರಿಗೂ ದೊಡ್ಮನೆ ಊಟದ ವ್ಯವಸ್ಥೆ ಮಾಡಿಸಿದ್ದು ವಿಶೇಷ. ಸುಮಾರು 80 ಮಂದಿ ಅಡುಗೆ ಭಟ್ಟರಿಂದ 80 ಸಾವಿರದಿಂದ ಒಂದು ಲಕ್ಷದ ಮಂದಿಗೆ ಪ್ರೀತಿಯಿಂದ ವಿಶೇಷ ಖಾದ್ಯಗಳನ್ನ ಉಣಬಡಿಸಲಾಗಿದೆ.

ಪವರ್ ಟಿವಿ ಜೊತೆ ಭಾವನಾತ್ಮಕವಾಗಿ ಮಾತನಾಡಿದ ಬಾಣಸಿಗರು, ಅವ್ರ ಅಭಿಮಾನಿಗಳಾಗಿ ತುಂಬು ಹೃದಯದ ಪ್ರೀತಿಯಿಂದ ಅಡುಗೆ ಮಾಡಿ ಬಡಿಸಿದ್ದು ವಿಶೇಷ.

ಸಾವಿರಾರು ಅಭಿಮಾನಿಗಳು ತರಹೇವಾರಿ ತಮ್ಮ ಅಭಿಮಾನ ವ್ಯಕ್ತಪಡಿಸಿದರು. ಆದ್ರೆ ಕೆಲವರಷ್ಟೇ ಕ್ಯಾಮೆರಾದಲ್ಲಿ ವಿಶೇಷವಾಗಿ ಸೆರೆ ಸಿಕ್ಕರು. ಆ ಪೈಕಿ ಸುಮಾರು 20ರಿಂದ 25 ದಿನಗಳ ಕಾಲ ಕಡ್ಲೆ ಪುರಿ ಹಾಗೂ ಬತ್ತಾಸ್​ಗಳನ್ನ ಪೋಣಿಸಿ ಅಪ್ಪುಗಾಗಿ ವಿಶೇಷ ಹಾರ ತಯಾರಿಸಿದರು. ಅದು ನಿಜಕ್ಕೂ ವಿಶೇಷ ಅನಿಸಿತು.

ಇನ್ನು ಕಿನ್ನರ ಜೋಗಿ ಹಾಡಿದ ಜಾನಪದ ಹಾಡು ಕೇಳುಗರ ಮನಸೂರೆಗೊಂಡಿತು. ಕಲಾವಿದರು ತಮ್ಮ ಮ್ಯೂಸಿಕಲ್ ಇನ್ಸ್​ಟ್ರುಮೆಂಟ್​ಗಳಲ್ಲಿ ಅಪ್ಪು ಹಾಡುಗಳಿಗೆ ಟ್ಯೂನ್ ಮಾಡಿ ನುಡಿಸಿದರು.

ಇದಲ್ಲದೆ, ಟ್ಯಾಟೂ ಹಾಕಿಸಿಕೊಂಡವ್ರು, ಮೊಬೈಲ್ ಪೌಚ್ ಮಾರಿದವ್ರು, ಕೊಂಡವ್ರು ಹೀಗೆ ಸಹಸ್ರಾರು ಮಂದಿ ಇಂದಿನ ಮೊದಲ ಪುಣ್ಯ ಸ್ಮರಣೆಗೆ ಸಾಕ್ಷಿ ಆದರು, ಇಡೀ ಚಿತ್ರರಂಗ ಅಪ್ಪು ಮತ್ತೆ ಹುಟ್ಟಿ ಬರಲಿ ಅಂತ ಪ್ರಾರ್ಥಿಸಿತು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES