Friday, March 29, 2024

ರಾಷ್ಟ್ರೀಯ ಮಟ್ಟದ ಕಬ್ಬಡ್ಡಿ ಕಲರವ

ಗದಗ : ಕ್ರೀಡೆ ಇಲ್ಲದವರ ಬಾಳು ಕೀಡೆ ತಿಂದ‌ ಹಣ್ಣಿನಂತೆ ಎಂಬಂತೆ ಮನುಷ್ಯನಿಗೆ ಕ್ರೀಡೆ ಅತ್ಯವಶ್ಯಕ. ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ 3 ದಿನಗಳ ರಾಷ್ಟ್ರಮಟ್ಟದ ಎ ಗ್ರೇಡ್ ಕಬ್ಬಡ್ಡಿ ಕ್ರೀಡಾಕೂಟ ನಡೆಯಿತು. ನರಗುಂದ ಲಯನ್ಸ್ ಕ್ಲಬ್, ರಾಜ್ಯ ಅಮೇಚೂರ ಕಬ್ಬಡ್ಡಿ ಅಸೋಸಿಯೇಷನ್, ಸಚಿವ ಸಿ.ಸಿ ಪಾಟೀಲ್​​ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಕಬ್ಬಡ್ಡಿ ವೈಭವ ಮೈ ಜುಂ ಎನಿಸುವಂತಿತ್ತು.

ನರಗುಂದದ ಬಾಬಾ ಸಾಹೇಬ್ ತಾಲೂಕು ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯ ಏರ್ಪಡಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ಹಿಮಾಚಲ ಪ್ರದೇಶ, ಹರಿಯಾಣ, ಉತ್ತರ ಪ್ರದೇಶ, ಗುಜರಾತ್, ದೆಹಲಿ, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಕೇರಳ ಸೇರಿದಂತೆ ಕರ್ನಾಟಕದ ಪ್ರಸಿದ್ಧ ಕಬ್ಬಡ್ಡಿ ತಂಡಗಳು ಭಾಗವಹಿಸಿದ್ದವು. ರಾಷ್ಟ್ರೀಯ ಮಟ್ಟದ ಎ ಗ್ರೇಡ್​​ನಿಂದ 60 ತಂಡಗಳ ಇದ್ದವು. ಅದರಲ್ಲಿ 37 ಪುರುಷ ಹಾಗೂ 23 ಮಹಿಳಾ ತಂಡಗಳ ಸಾವಿರಾರು ಕ್ರೀಡಾಪಟುಗಳು ಭಾಗವಹಿಸಿದ್ದರು. ಲೋಕೋಪಯೋಗಿ ಸಚಿವ ಸಿ.ಸಿ‌ ಪಾಟೀಲ್​​​ ಅವರು ಮೂರು ದಿನಗಳ ಕಾಲ ಕ್ರೀಡೆ ಕಣ್ತುಂಬಿಕೊಂಡರು.

ನರಗುಂದ ಬಂಡಾಯದ‌ ನಾಡಲ್ಲಿ ಕ್ರೀಡೆಯ ಕಿಚ್ಚು ಮತ್ತಷ್ಟು ಹೆಚ್ಚುವಂತೆ ಮಾಡಿತು. ಮಹಿಳೆಯರು ಸಹ ನಾವೇನು ಕಮ್ಮಿಯಿಲ್ಲ ಎಂಬಂತೆ ಭಾಗಿಯಾಗಿದ್ರು. ಸಮಬಲ‌ಗಳ ಸ್ಕೋರ್, ಬೋನಸ್ ಪಾಯಿಂಟ್, ಕ್ಯಾಚ್‌ ಮಾಡಿ, ಜಂಪ್‌ ಮಾಡುವ ದೃಶ್ಯ ವೀಕ್ಷಕರನ್ನ ದಂಗಾಗಿಸುವಂತಿತ್ತು. ಎದುರಾಳಿ ಟೀಮ್ ವಿರುದ್ಧ ಸೆಣಸಾಡುವ ದೃಶ್ಯವಂತೂ ನೇರದವರನ್ನ ಕೇಕೆ, ಶಿಳ್ಳೆ, ಚಪ್ಪಾಳೆ ಹೊಡೆಯುವಂತೆ ಮಾಡಿತ್ತು. ಮಹಿಳೆಯರು, ಪುರುಷರು, ಮಕ್ಕಳು ಸೇರಿದಂತೆ ಲಕ್ಷಾಂತರ ಜನ ಕಿಕ್ಕಿರಿದು ಸೇರಿದ್ರು.

ಪ್ರಥಮ ಬಹುಮಾನ 2 ಲಕ್ಷದ 50 ಸಾವಿರ ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನ 1 ಲಕ್ಷದ 50 ಸಾವಿರ ಹಾಗೂ ಟ್ರೋಫಿ, ತೃತೀಯ ಬಹುಮಾನ 1 ಲಕ್ಷ ರೂಪಾಯಿ ನೀಡಿ ಗೌರವಿಸಲಾಯಿತು. ಪುರುಷ ವಿಭಾಗದಲ್ಲಿ ಹಿಮಾಚಲ‌ ಪ್ರದೇಶದ ತಂಡ ಪ್ರಥಮ ಸ್ಥಾನ, ದ್ವೀತಿಯ ನ್ಯೂ ಡೆಲ್ಲಿಯ ರೆಡ್ ಆರ್ಮಿ ತಂಡ, ತೃತೀಯ‌ ಸ್ಥಾನ ಎಂ.ಡಿ.ವಿಶ್ವವಿದ್ಯಾಲಯದ ರೋಟಕ್ ಹಾಗೂ ತಮಿಳನಾಡಿನ ಇನ್ ಕಂ ಟ್ಯಾಕ್ಸ್ ತಂಡ ನಾಲ್ಕನೆ ಸ್ಥಾನ ಪಡೆದುಕೊಂಡವು. ಇನ್ನು ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಹರಿಯಾಣದ ಗುರುಕುಲ ತಂಡ, ದ್ವಿತೀಯ ಸ್ಥಾನ ಎಂ.ಡಿ.ವಿಶ್ವವಿದ್ಯಾಲಯ ರೋಟಕ್ ತಂಡ, ತೃತೀಯ ಸ್ಥಾನ ಸಾಯಿ ಸೋನಿಪಥ್ ಹಾಗೂ ಹಿಮಾಚಲ ಪ್ರದೇಶದ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿತು. ಒಟ್ನಲ್ಲಿ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕಬ್ಬಡ್ಡಿ ರಣರೋಚಕ‌ ಅನುಭವ ನೀಡಿದ್ದು ಮಾತ್ರ ಸುಳ್ಳಲ್ಲ.

ಮಹಲಿಂಗೇಶ್ ಹಿರೇಮಠ. ಪವರ್ ಟಿವಿ.ಗದಗ

RELATED ARTICLES

Related Articles

TRENDING ARTICLES