ಬೆಂಗಳೂರು : ಆ್ಯಪ್ ಆಧಾರಿತ ಆಟೋಗಳ ವಿರುದ್ದ ಸಾರಿಗೆ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಓಲಾ, ಉಬರ್, ರ್ಯಾಪಿಡೋ ಆ್ಯಪ್ ಮೂಲಕ ಆಟೊ ಓಡಿಸಿದ್ರೆ ಜಪ್ತಿ ಮಾಡೋದಾಗಿ ಸಾರಿಗೆ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಈ ಬೆನ್ನಲ್ಲೇ ಜಯನಗರ ಆರ್ ಟಿ ಓ ಅಧಿಕಾರಿಗಳು ಇರ್ಷಾದ್ ಅನ್ನೋ ಚಾಲಕನ ಆ್ಯಪ್ ಆಧಾರಿತ ಆಟೋಗೆ 6 ಸಾವಿರ ರೂ. ದಂಡದ ರಸೀದಿಯನ್ನು ಕೊಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದ ಆಟೋ ಚಾಲಕರು ಜಯನಗರ ಬಸ್ ನಿಲ್ದಾಣದ ಬಳಿ ಬೃಹತ್ ಪ್ರತಿಭಟನೆ ನಡೆಸಿದ್ರು.
ಓಲಾ, ಉಬರ್, ರ್ಯಾಪಿಡ್ ಕಂಪನಿಗಳಿಗೆ ಇಗಾಗಲೇ ನೋಟಿಸ್ ನೀಡಲಾಗಿತ್ತು. ಕೊಟ್ಟ ಗಡುವು ಕೂಡ ಮುಗಿದಿದೆ. ಆದ್ರೆ ಓಲಾ, ಊಬರ್ ಕಂಪನಿಗಳಿಂದ ಮಾತ್ರ ಪ್ರತಿಕ್ರಿಯೆ ಸಿಕ್ಕಿದ್ದು, ಮಂಗಳವಾರ ಸಂಜೆಯ ತನಕ ಇನ್ನೊಮ್ಮೆ ಅವಕಾಶ ನೀಡಲಾಗಿದೆ. ಮಂಗಳವಾರ ಸಂಜೆ ಓಲಾ, ಉಬರ್ ಆಟೋ ಗಳ ಭವಿಷ್ಯ ನಿರ್ಧಾರವಾಗಲಿದ್ದು, ಸಾರಿಗೆ ಇಲಾಖೆಯ ಆಯುಕ್ತರ ಸಭೆಯ ಬಳಿಕ ಅಂತಿಮ ನಿರ್ಣಯ ಗೊತ್ತಾಗಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾರಿಗೆ ಇಲಾಖೆಯ ಅಪರ ಆಯುಕ್ತ ಮಲ್ಲಿಕಾರ್ಜುನ್, ನಮ್ಮ ಲೀಗಲ್ ಟೀಂ ಜೊತೆ ಮಾತನಾಡಿ, ಕ್ರಮಕ್ಕೆ ಮುಂದಾಗ್ತೇವೆ ಎಂದಿದ್ದಾರೆ.
ಕಂಪನಿಗಳ ವಿರುದ್ದ ಕ್ರಮ ಕೈಗೊಳ್ಳದೇ, ಆಟೋಗಳನ್ನು ಸೀಸ್ ಮಾಡುವ ಸಾರಿಗೆ ಇಲಾಖೆಯ ಕ್ರಮಕ್ಕೆ ತೀವ್ರ ಆಕ್ರೋಶಗಳು ವ್ಯಕ್ತವಾಗಿವೆ. ಆಟೋಗಳನ್ನು ಸೀಸ್ ಮಾಡಿದ್ರೆ, ಸಿಎಂ, ಸಾರಿಗೆ ಸಚಿವ್ರ ಮನೆಗಳಿಗೆ ಮುತ್ತಿಗೆ ಹಾಕ್ತೇವೆ ಅಂತ ಸರ್ಕಾರಕ್ಕೆ ಎಚ್ಚರಿಕೆ ಕೊಡಲಾಗಿದೆ. ಸದ್ಯಕ್ಕೆ ಪ್ರತಿಭಟನೆ ಕೈ ಬಿಟ್ಟಿದ್ದಾಗಿದೆ. ಆದ್ರೆ, ದಂಡದ ಅಸ್ತ್ರ ಮುಂದುವರೆಯಲಿದ್ದು, ಮತ್ಯಾವ ಸ್ವರೂಪ ಪಡೆಯುತ್ತೋ ಕಾದು ನೋಡಬೇಕಿದೆ.
ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು