ಬಳ್ಳಾರಿ : ಜಿಲ್ಲೆಗೆ ಹೊಂದಿಕೊಂಡಂತಿರುವ ಆಂಧ್ರದ ಗಡಿಗ್ರಾಮ ದೇವರಗಟ್ಟು ಗ್ರಾಮದ ಮಾಳ ಮಲ್ಲೇಶ್ವರ ಜಾತ್ರೆಯಲ್ಲಿ ಮಧ್ಯರಾತ್ರಿ ಭಕ್ತರ ಬಡಿಗೆಗಳ ಕಾದಾಟ ಜೋರಾಗಿತ್ತು. ಇದೊಂದು ಭಯಾನಕ ಬಡಿಗೆ ಬಡಿದಾಟದ ಜಾತ್ರೆಯಾಗಿದೆ. ಇಲ್ಲಿ ಕರ್ನಾಟಕದ ಭಕ್ತರೇ ಹೆಚ್ಚಾಗಿ ಭಾಗಿಯಾಗುತ್ತಾರೆ. ಸುಮಾರು 20 ಸಾವಿರಕ್ಕೂ ಹೆಚ್ಚು ಜನ ಪ್ರತಿ ವರ್ಷದ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ..ಇದು ಎರಡು ಗ್ರಾಮಗಳ ನಡುವೆ ನಡೆಯುವ ಸಾಂಪ್ರದಾಯಿಕ ಬಡಿಗೆ ಬಡಿದಾಟವಾಗಿದೆ. ಸಂಪ್ರದಾಯದಂತೆ ಈ ವರ್ಷವೂ ಕೈಯಲ್ಲಿ ಬಡಿಗೆಗಳನ್ನು ಹಿಡಿದು ಒಬ್ಬರಿಗೊಬ್ಬರು ಜನ ಬಡಿದಾಡಿಕೊಂಡಿದ್ದಾರೆ.
ಪ್ರತಿ ವರ್ಷ ವಿಜಯದಶಮಿಯಂದು ನಡೆಯುವ ಮಾಳ ಮಲ್ಲೇಶ್ವರ ಕಲ್ಯಾಣೋತ್ಸವದಲ್ಲಿ ದೇವರನ್ನು ಒಲಿಸಿಕೊಳ್ಳುವುದಕ್ಕಾಗಿ ಇಲ್ಲಿನ ಗ್ರಾಮಸ್ಥರು ದೊಣ್ಣೆಗಳಿಂದ ಪರಸ್ಪರ ಹೊಡೆದಾಡುತ್ತಾರೆ.ಕರ್ನೂಲು ಜಿಲ್ಲೆ ಆಲೂರು ಮಂಡಲದ ನೆಣಕಿ ಗ್ರಾಮಕ್ಕೆ ಸೇರಿದ ಅರಣ್ಯ ಪ್ರದೇಶದ ಗುಡ್ಡದ ಮೇಲೆ ಈ ಮಾಳ ಮಲ್ಲೇಶ್ವರಸ್ವಾಮಿ ದೇವಸ್ಥಾನವಿದೆ.ಇಲ್ಲಿನ ಬಹುತೇಕ ಜನ ಕನ್ನಡ ಭಾಷಿಕರೇ ಆಗಿದ್ದು, ಕಾರಣಿಕ ನುಡಿ ಸಹ ಕನ್ನಡ ಭಾಷೆಯಲ್ಲೇ ಆಗುವುದು ವಿಶೇಷ. ಅಲ್ಲದೆ, ಬಡಿಗೆ ಬಡಿದಾಟದಲ್ಲಿ ವಿದ್ಯಾವಂತ ಯುವಕರೇ ಹೆಚ್ಚಾಗಿ ಭಾಗವಹಿಸುವುದು ಮತ್ತೊಂದು ವಿಶೇಷ. ಅಲ್ಲದೆ, ಸ್ವಾಮಿಯ ಉತ್ಸವಮೂರ್ತಿ ಮೆರವಣಿಗೆಯಲ್ಲಿ ಭಕ್ತಸಾಗರವೇ ನೆರೆದಿತ್ತು.
ಪ್ರತಿ ವರ್ಷದಂತೆ ಈ ವರ್ಷವೂ ದಸರಾ ಹಬ್ಬದ ರಾತ್ರಿ ನಡೆದ ಕಲ್ಯಾಣೋತ್ಸವದಲ್ಲಿ ಮೂರ್ತಿಗಳ ರಕ್ಷಣೆಯಲ್ಲಿ ನೇರಣಕಿ ಭಕ್ತ ಸಮೂಹ ಮತ್ತು ಅರಕೆರ, ಎಳ್ಳಾರ್ಥಿ, ವಿರುಪಾಪುರ, ಸುಳುವಾಯಿ ಮೊದಲಾದ ಸುತ್ತಮುತ್ತಲ ಗ್ರಾಮಗಳ ಜನತೆ ಉತ್ಸವ ಮೂರ್ತಿಗಳನ್ನು ತಮ್ಮ ಗ್ರಾಮಕ್ಕೆ ತೆಗೆದುಕೊಂಡು ಹೋಗಬೇಕು ಎಂಬ ಪ್ರಯತ್ನದಿಂದ ಒಬ್ಬರಿಗೊಬ್ಬರು ಬಡಿಗೆ ಮೂಲಕ ಕಾದಾಡಿದ್ದಾರೆ. ಈ ವರ್ಷ 80ಕ್ಕೂ ಹೆಚ್ಚು ಜನರು ಗಾಯಗೊಂಡರೆ, ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ. ಕೂಡಲೇ ಚಿಕಿತ್ಸೆ ನೀಡಲು ಸ್ಥಳದಲ್ಲಿಯೇ ಜಿಲ್ಲಾಡಳಿತ ವ್ಯವಸ್ಥೆ ಮಾಡಿತ್ತು.
ಒಟ್ಟಿನಲ್ಲಿ ಪ್ರತಿ ವರ್ಷ ಮಾಳ ಮಲ್ಲೇಶ್ವರ ಜಾತ್ರೆಯಲ್ಲಾದ ಬಡಿಗೆ ಬಡಿದಾಟ ಭಾರೀ ಚರ್ಚೆಗೆ ಗ್ರಾಸವಾಗಿದೆ.