ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮು ಕಾಶ್ಮೀರದ ಪ್ರವಾಸದಲ್ಲಿದ್ದಾರೆ. ಇಂದು ಅವರು ರಾಜೌರಿ ಜಿಲ್ಲೆಯಲ್ಲಿ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಮ್ಮು ಮತ್ತು ರಾಜೌರಿ ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಈ 2 ಜಿಲ್ಲೆಗಳಲ್ಲಿ ತಾತ್ಕಾಲಿಕವಾಗಿ ಇಂಟರ್ನೆಟ್ ಸೇವೆ ಸ್ಥಗಿತವಾಗಿದೆ. ಈ ರ್ಯಾಲಿಗೂ ಮೊದಲು ಅಮಿತ್ ಶಾ ಮಾತಾ ವೈಷ್ಣೋದೇವಿ ದರ್ಶನ ಪಡೆದಿದ್ದಾರೆ.
ಕೇಂದ್ರ ಗೃಹ ಸಚಿವ ಜಮ್ಮುವಿಗೆ ಭೇಟಿ ನೀಡಿರುವುದರಿಂದ ಇಂದು ಸಂಜೆ 5 ಗಂಟೆಯವರೆಗೆ ಜಮ್ಮು ಹಾಗೂ ರಾಜೌರಿ ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕತ್ರಾದಲ್ಲಿರುವ ಶ್ರೀ ಮಾತಾ ವೈಷ್ಣೋದೇವಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಸಂಜಿಚಟ್ ಹೆಲಿಪ್ಯಾಡ್ ಮೂಲಕ ಅವರು ಕತ್ರಾ ದೇಗುಲವನ್ನು ತಲುಪಿದ್ದಾರೆ. ಅವರೊಂದಿಗೆ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಕೂಡ ತೆರಳಿದ್ದರು.
ಕೇಂದ್ರ ಗೃಹ ಸಚಿವರಾಗಿ ನೇಮಕಗೊಂಡ ನಂತರ ಅಮಿತ್ ಶಾ ಅವರ ಮೊದಲ ಜಮ್ಮು ಭೇಟಿ ಇದಾಗಿದೆ. ಅಮಿತ್ ಶಾ ನಂತರ ವೈಷ್ಣೋ ದೇವಿ ದೇವಸ್ಥಾನದಿಂದ ಸುಮಾರು ಒಂದೂವರೆ ಗಂಟೆಗಳ ಕಾಲ ಪ್ರಯಾಣ ಮಾಡಿ ರಾಜೌರಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ವೇಳೆ ಅವರು ಸಾಕಷ್ಟು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಜಮ್ಮುವಿನ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ.