Monday, December 23, 2024

ಮಂಗಳೂರು, ಶಿವಮೊಗ್ಗದಲ್ಲೂ ದಸರಾ ವೈಭವ

ಮಂಗಳೂರು : ಮೈಸೂರಿನಲ್ಲಿ ದಸರಾ ದರ್ಬಾರ್ ಮೇಳೈಸಿರುವ ಬೆನ್ನಲ್ಲೇ ಮಂಗಳೂರು ಹಾಗೂ ಶಿವಮೊಗ್ಗದಲ್ಲೂ ನಾಡಹಬ್ಬದ ಸಂಭ್ರಮ ಮನೆ ಮಾಡಿದೆ. ಮಂಗಳೂರಿನಲ್ಲಿ ವಿದ್ಯುತ್ ದೀಪಗಳ ಬಣ್ಣದ ಚಿತ್ತಾರ ನೋಡುಗರನ್ನು ಮನಸೂರೆಗೊಳಿಸುತ್ತಿದೆ.ಮಂಗಳೂರು ದಸರಾ ಕೇಂದ್ರಸ್ಥಾನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಸಂಜೆಯಾಗುತ್ತಿದ್ದಂತೆ ಭೂಲೋಕದ ಸ್ವರ್ಗದಂತೆ ಕಂಗೊಳಿಸುತ್ತಿದೆ. ಕ್ಷೇತ್ರ ಮಾತ್ರವಲ್ಲದೆ ದಸರಾ ಮೆರವಣಿಗೆ ಹಾದು ಹೋಗುವ ನಗರದ ಸುಮಾರು 7 ಕಿಲೋ ಮೀಟರ್ ರಸ್ತೆಯುದ್ದಕ್ಕೂ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.

ನವರಾತ್ರಿಯ ಎಲ್ಲಾ ದಿನ ನಗರದ ರಸ್ತೆಗಳೆಲ್ಲಾ ಬೆಳಕಿನ ಚಿತ್ತಾರದಿಂದ ಮಧುವಣಗಿತ್ತಿಯಂತೆ ಅಲಂಕಾರಗೊಳ್ಳುತ್ತವೆ.. ದೇಶದ ಬೇರೆಲ್ಲೂ ಇಷ್ಟು ಪ್ರಮಾಣದಲ್ಲಿ ಬೆಳಕಿನ ಸಂಯೋಜನೆ ಕಾಣಸಿಗದು. ಸರ್ಕಾರದ ಅಥವಾ ಇನ್ಯಾವುದೇ ಅನುದಾನ ಇಲ್ಲದೆ ಕ್ಷೇತ್ರದ ವತಿಯಿಂದಲೇ ಈ ಬೆಳಕಿನ ಸಂಯೋಜನೆಯನ್ನು ಮಾಡುವುದು ಇಲ್ಲಿನ ವಿಶೇಷತೆ. ಅ.5ರಂದು ಅದ್ದೂರಿ ಮಂಗಳೂರು ದಸರಾ ಮೆರವಣಿಗೆ ನಗರದಾದ್ಯಂತ ನಡೆಯಲಿದ್ದು ರಾತ್ರಿಯಿಡೀ ಸಾಗುವ ಶೋಭಾಯಾತ್ರೆಗೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಲಿದ್ದಾರೆ.

ಇನ್ನು ಶಿವಮೊಗ್ಗದಲ್ಲಿ ಗೊಂಬೆಗಳ ದಸರಾ ದರ್ಬಾರ್ ಜೋರಾಗಿದೆ.ಕೆಲವರ ಮನೆಗಳಲ್ಲೇ ಗೊಂಬೆಗಳನ್ನು ಕೂರಿಸಲಾಗಿದೆ. ಕಲ್ಲಪ್ಪನಕೇರಿಯ ನಿರ್ಮಲಾ ಮತ್ತು ಶೀಲಾ ಎಂಬುವವರ ಮನೆಯಲ್ಲಿ ರಾಮಾಯಣ ದರ್ಶನದ ಬೊಂಬೆಗಳು, ದಶಾವತಾರ, ಸತ್ಯನಾರಾಯಣ ಪೂಜೆ, ಅಷ್ಟಲಕ್ಷ್ಮಿಯರು, ವಿಠಲ-ರುಕುಮಾಯಿ, ಶ್ರೀ ರಾಮ ಪಟ್ಟಾಭಿಷೇಕ ಸನ್ನಿವೇಶ ಬಿಂಬಿಸುವ ಗೊಂಬೆಗಳು ಮನಸೂರೆಗೊಳಿಸುತ್ತಿವೆ. ಒಟ್ಟಾರೆ ಮೈಸೂರು ಜತೆಗೆ ಕರಾವಳಿ, ಮಲೆನಾಡಿನಲ್ಲೂ ದಸರಾ ದರ್ಬಾರ್ ಜೋರಾಗಿದೆ.

RELATED ARTICLES

Related Articles

TRENDING ARTICLES