Tuesday, November 5, 2024

ರಿಷಬ್​ ಶೆಟ್ಟಿ ನಟನೆಗೆ ಬೋಲ್ಡ್​ ಆದ ಸ್ಯಾಂಡಲ್​ವುಡ್​; ‘ಕಾಂತಾರ’ ಚಿತ್ರದ ಪವರ್​ ವಿಮರ್ಶೆ

ಬೆಂಗಳೂರು: ಕೆಲವೊಮ್ಮೆ ಸಿನಿಮಾಗಳು ನಿರೀಕ್ಷೆಗಿಂತ ಕೊಂಚ ಜಾಸ್ತಿನೇ ಚೆನ್ನಾಗಿರುತ್ತದೆ. ಅದೇ ಬಗೆಯ ಸಿನಿಮಾಗಳ ಸಾಲಿಗೆ ಕಾಂತಾರ ಚಿತ್ರ ಸೇರಿದೆ. ನಟ ರಿಷಬ್ ಶೆಟ್ಟಿ ಬರೋಬ್ಬರಿ ನಾಲ್ಕು ವರ್ಷದ ಬಳಿಕ ಡೈರೆಕ್ಟ್ ಮಾಡಿ, ಮುಖ್ಯಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಅವರ ಮಸ್ತಕ & ಮೈಕಟ್ಟಿನ ಎನರ್ಜಿಯನ್ನ ಪರಿಚಯಿಸಿದೆ. ಸ್ಟೇಟ್ ಅವಾರ್ಡ್​ ಫಿಕ್ಸ್ ಅಂತಿರುವ ಈ ಸಿನಿಮಾದ ಅಸಲಿ ಕಥೆ ಏನು, ಪರ್ಫಾಮೆನ್ಸ್ ಹೇಗಿದೆ? ಪ್ಲಸ್ ಜೊತೆ ಮೈನಸ್ ಏನು ಅನ್ನೋದ್ರ ಪಿನ್ ಟು ಪಿನ್ ಡಿಟೈಲ್​​ ರಿವ್ಯೂ ರಿಪೋರ್ಟ್​ ಇಲ್ಲಿದೆ.

ರಿಷಬ್- ಹೊಂಬಾಳೆ ಕಾಂತಾರ ಗಮ್ಮತ್ತಿಗೆ ಇಂಡಸ್ಟ್ರಿ ಬೋಲ್ಡ್

ಶೆಟ್ರ ಮಸ್ತಕ & ಮೈಕಟ್ಟಿನ ಎನರ್ಜಿಗೆ ಸ್ಟೇಟ್ ಅವಾರ್ಡ್​ ಫಿಕ್ಸ್..!

ಕಥೆ ಹಾಗೂ ಮೇಕಿಂಗ್​ನಿಂದ ಎಲ್ಲರ ನಿರೀಕ್ಷೆ ದುಪ್ಪಟ್ಟು ಮಾಡಿದ್ದ ಕಾಂತಾರ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ಬಳಿಕ ರಿಷಬ್ ಶೆಟ್ಟಿ ನಿರ್ದೇಶಿಸಿ, ಫುಲ್ ಫ್ಲೆಡ್ಜ್ ರೋಲ್​ನಲ್ಲಿ ನಟಿಸಿರುವ ಸಿನಿಮಾ ಇದಾಗಿದ್ದು, ಕರಾವಳಿ ಮಣ್ಣಿನ ಕಥೆಯನ್ನ ಈ ಚಿತ್ರದಲ್ಲಿ ಹೇಳಲಾಗಿದೆ.

ರಿಷಬ್ ಶೆಟ್ಟಿ ಡೈರೆಕ್ಷನ್ ಕ್ಯಾಲಿಬರ್​ನ ಮೈಲೇಜ್ ಹೆಚ್ಚಿಸಿರುವ ಈ ಸಿನಿಮಾ, ಅವ್ರ ಮಸ್ತಕದ ಕ್ರಿಯಾಶೀಲತೆಯ ಜೊತೆ ಮೈಕಟ್ಟಿನ ಎನರ್ಜಿ ಎಂಥದ್ದು ಅನ್ನೋದನ್ನ ಪ್ರೂವ್ ಮಾಡಿದೆ.

ಕಾಂತಾರ ಸ್ಟೋರಿಲೈನ್

ಕಾಡುಬೆಟ್ಟು ಅನ್ನೋ ಒಂದು ಊರು. ಅಲ್ಲಿ ಪಂಜುರ್ಲಿ ದೈವಾರಾಧನೆ ಮಾಡೋ ಜನ. ಕೋಲ ಕಟ್ಟುತ್ತಿದ್ದ ನಾಯಕನಟ ಶಿವನ ತಂದೆ ನಾಪತ್ತೆ ಆಗ್ತಾರೆ. ಅದ್ರ ಹಿಂದಿನ ಇತಿಹಾಸ ಕೆದಕಿದ್ರೆ, ನಿದ್ದೆ ಹಾಗೂ ನೆಮ್ಮದಿಗಾಗಿ ರಾಜನೊಬ್ಬ ಅದೇ ಊರಿನಲ್ಲಿದ್ದ ಒಂದೇ ಒಂದು ಕಲ್ಲಿಗಾಗಿ ನೂರಾರು ಎಕರೆ ಭೂಮಿಯನ್ನ ಊರಿನವ್ರಿಗೆ ಬಿಟ್ಟುಕೊಟ್ಟಿರ್ತಾರೆ. ಕೊಟ್ಟ ಜಾಗವನ್ನು ವಾಪಸ್ ತೆಗೆದುಕೊಳ್ಳೋಕೆ ಮುಂದಾಗುವ ಅವ್ರ ವಂಶಸ್ಥರು, ದೈವ ಕೊಟ್ಟ ಮಾತನ್ನ ತಪ್ಪಿದಂತಾಗುತ್ತದೆ. ದೈವ ನರ್ತಕನ ಮೇಲೆ ದೈವವೇ ಬಂದು, ಕೋರ್ಟ್​ ಮೆಟ್ಟಿಲೇರೋಕೂ ಮುನ್ನ ಆತನನ್ನ ರಕ್ತಕಕ್ಕಿ ಸಾಯುವಂತೆ ಮಾಡುತ್ತದೆ. ಇದು ಚಿತ್ರದ ಅಸಲಿ ತಿರುಳಾಗಿದೆ.

ಆದ್ರೆ ಆ ಕೋಲ ಕಟ್ಟುತ್ತಿದ್ದು ನಾಪತ್ತೆಯಾದವನ ಮಗ ಶಿವನೇ ಚಿತ್ರದ ಅಸಲಿ ಕಥಾನಾಯಕ. ಊರಲ್ಲಿ ಒಂದು ಗ್ಯಾಂಗ್ ಕಟ್ಟಿಕೊಂಡು, ತುಂಟತನದಿಂದ ಅಲ್ಲಿನ ಆಚಾರ, ನಂಬಿಕೆಗಳನ್ನ ಪಾಲಿಸೋ ಯೂತ್ ಐಕಾನ್. ಕೆರಾಡಿ ಕಂಬಳೋತ್ಸವದಲ್ಲಿ ಶಿವನ ಕೋಣಗಳದ್ದೇ ದರ್ಬಾರ್. ಊರಲ್ಲಿ ಶಿವನದ್ದೇ ಕಾರುಬಾರು. ದೇವೇಂದ್ರ ಸುತ್ತೂರು ಅನ್ನೋ ಆ ಊರಿನ ಧಣಿ, ಶಿವನನ್ನ ಮುಂದಿಟ್ಟುಕೊಂಡು ಬೇಟೆ, ಮರ ಕಡಿಯೋ ಅಂತಹ ಸಾಕಷ್ಟು ಕಾರ್ಯಗಳನ್ನ ಈಡೇರಿಸಿಕೊಳ್ತಿರ್ತಾನೆ. ಅಷ್ಟರಲ್ಲೇ ಖಡಕ್ ಫಾರೆಸ್ಟ್ ಆಫೀಸರ್ ಎಂಟ್ರಿಯಾಗಿ ಡಿಆರ್​ಎಫ್​​ಓನಿಂದ ಒತ್ತುವರಿ ಆದ ಅರಣ್ಯ ಭೂಮಿಯನ್ನ ಸ್ವಾಧೀನ ಮಾಡಿಕೊಳ್ಳೋಕೆ ಮುಂದಾಗ್ತಾರೆ. ಕೊನೆಗೆ ಅದು ಫಾರೆಸ್ಟ್ ಆಫೀಸರ್ ವರ್ಸಸ್ ಶಿವ ಆಗಿ ಬದಲಾಗುತ್ತದೆ.

ಈ ಮಧ್ಯೆ ಲೀಲಾ ಎನ್ನೋ ಅದೇ ಊರಿನ ಹುಡ್ಗಿ ಫಾರೆಸ್ಟ್ ಟ್ರೈನಿಂಗ್ ಮುಗಿಸಿ, ಊರಿಗೆ ವಾಪಸ್ ಆಗಿ ಅದೇ ಊರಲ್ಲಿ ಶಿವ ಹಾಗೂ ಧಣಿ ಸಹಾಯದಿಂದ ಕೆಲಸಕ್ಕೆ ಸೇರುತ್ತಾರೆ. ಶಿವ-ಲೀಲಾ ಪ್ರೇಮ್ ಕಹಾನಿ ಜೊತೆ ಶಿವ-ಫಾರೆಸ್ಟ್ ಆಫೀಸರ್ ಜುಗಲ್​ಬಂದಿ ಮುಂದುವರೆಯುತ್ತದೆ. ಕೊನೆಗೆ ಭೂಮಿ ಸ್ವಾಧೀನ ಆಗುತ್ತಾ..? ಶಿವನಿಗೆ ಕನಸಲ್ಲಿ ಬರುತ್ತಿದ್ದ ಕೋಲ ಕಟ್ಟಿದವ ಏನು ಹೇಳಲು ಬಯಸ್ತಾನೆ. ಶಿವನ ಮಾವ ಗುರುವಾ ಸಾವು ಯಾಕಾಗುತ್ತದೆ. ಅದ್ರ ಹಿಂದಿನ ನಿಗೂಢತೆ ಏನು ಅನ್ನೋದೇ ಚಿತ್ರದ ಕಥಾನಕವಾಗಿದೆ.

ಕಾಂತಾರ ಆರ್ಟಿಸ್ಟ್ ಪರ್ಫಾಮೆನ್ಸ್

ಶಿವನ ಪಾತ್ರದಲ್ಲಿ ರಿಷಬ್ ಶೆಟ್ಟಿ ಕರಾವಳಿಯ ಯೂತ್ ಐಕಾನ್ ಆಗಿ ಅಬ್ಬರಿಸಿದ್ದಾರೆ. ಅಲ್ಲಿನ ಆಚಾರ, ನಂಬಿಕೆ, ವಿಚಾರಗಳ ಪಾಲಕನಾಗಿ ಆತ ಇಡೋ ಒಂದೊಂದು ಹೆಜ್ಜೆಯೂ ಇಂಟರೆಸ್ಟಿಂಗ್ ಅನಿಸುತ್ತದೆ. ಅದ್ರಲ್ಲೂ ತನ್ನದೇ ವಿಶಿಷ್ಟ ಸ್ಟೈಲು, ಮ್ಯಾನರಿಸಂನಿಂದ ಶಿಳ್ಳೆ, ಚಪ್ಪಾಳೆ ಗಿಟ್ಟಿಸ್ತಾರೆ. ಅಮ್ಮನಿಗೆ ಮಗನಾಗಿ, ಪ್ರೇಮಿಯಾಗಿ, ಗೆಳೆಯರ ಅಚ್ಚುಮೆಚ್ಚಿನ ಗೆಳೆಯನಾಗಿ, ಕಂಬಳದ ಪಂಟರ್ ಆಗಿ, ಕೈಲಾಸದಲ್ಲಿ ಮಜಾ ಮಾಡೋ ಪೋಲಿಯಾಗಿ, ಫಾರೆಸ್ಟ್ ಆಫೀಸರ್ ವಿರುದ್ದ ಸಮರ ಸಾರೋ ಕೋಪಿಷ್ಟನಾಗಿ ಮನೋಜ್ಞ ಅಭಿನಯ ನೀಡಿದ್ದಾರೆ. ಈ ಸಿನಿಮಾದಲ್ಲಿ ಸಾಹಸ ದೃಶ್ಯಗಳು ಡಿಫರೆಂಟ್ ಅನಿಸಿದ್ದು, ರಿಷಬ್ ಶೆಟ್ಟಿಯ ಎನರ್ಜಿ ನೋಡುಗರಲ್ಲಿ ವ್ಹಾವ್ ಫೀಲ್ ಕೊಡುತ್ತದೆ.

ಕಥಾನಾಯಕಿಯಾಗಿ ನಟಿ ಸಪ್ತಮಿ ಗೌಡ ಭೇಷ್ ಎನ್ನುವಂತೆ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಫಾರೆಸ್ಟ್ ಗಾರ್ಡ್​ ರೋಲ್​ನಲ್ಲಿ ಊರಿನ ಹೆಣ್ಣು ಮಗಳಾಗಿ ಹಾಗೂ ಸರ್ಕಾರಿ ಕೆಲಸದಾಕೆಯಾಗಿ ಎರಡು ಶೇಡ್​ಗಳಲ್ಲಿ ಬೆಸ್ಟ್ ಪರ್ಫಾಮೆನ್ಸ್ ನೀಡಿದ್ದಾರೆ.

ಊರ ದಣಿಯಾಗಿ ಅಚ್ಯುತ್ ಹಾಗೂ ಫಾರೆಸ್ಟ್ ಆಫೀಸರ್ ಆಗಿ ಕಿಶೋರ್ ಪಾತ್ರಗಳು ಚಿತ್ರಕ್ಕೆ ಬೇರೆಯದ್ದೇ ರೂಪ ಕೊಟ್ಟಿವೆ. ಇವರೊಟ್ಟಿಗೆ ಪ್ರಮೋದ್ ಶೆಟ್ಟಿ ಕೂಡ ಗಮನ ಸೆಳೆಯಲಿದ್ದು, ಇಡೀ ಸಿನಿಮಾ ಇವರುಗಳ ಮೇಲೆ ಸಾಗಲಿದೆ. ನೋಡುಗರಿಗೆ ಮಸ್ತ್ ಮನರಂಜನೆ ಕೊಟ್ಟಿವೆ ಈ ಪಾತ್ರಗಳು.

ಕಾಂತಾರ ಪ್ಲಸ್ ಪಾಯಿಂಟ್ಸ್

  • ಕರಾವಳಿ ಮಣ್ಣಿನ ಸೊಗಡು, ಸೊಬಗಿನ ಕಥೆ
  • ರಿಷಬ್ ಶೆಟ್ಟಿ ನಿರ್ದೇಶನ, ನಿರೂಪಣೆ & ನಟನೆ
  • ಅತ್ಯದ್ಭುತ ಕ್ಲೈಮ್ಯಾಕ್ಸ್
  • ಕಂಬಳ, ಕೋಲ, ಪಂಜುರ್ಲಿ ದೈವಾರಾಧನೆ ಆಚರಣೆ & ನಂಬಿಕೆ
  • ಸಪ್ತಮಿ ಗೌಡ- ರಿಷಬ್ ಕೆಮಿಷ್ಟ್ರಿ
  • ಕಿಶೋರ್ ಖಾಕಿ ಖದರ್
  • ಬ್ಯಾಗ್ರೌಂಡ್ ಮ್ಯೂಸಿಕ್
  • ಆರ್ಟ್​ ವರ್ಕ್​ & ಲೈಟಿಂಗ್
  • ವಿಭಿನ್ನ ಸ್ಟಂಟ್ಸ್
  • ಕಾಮಿಡಿ ಟ್ರ್ಯಾಕ್
  • ರಿಚ್ ಪ್ರೊಡಕ್ಷನ್ ವ್ಯಾಲ್ಯೂಸ್

ಕಾಂತಾರ ಮೈನಸ್ ಪಾಯಿಂಟ್ಸ್

ರಾಜಮೌಳಿ, ಬನ್ಸಾಲಿ ಅಂತಹವರ ಸಿನಿಮಾಗಳಲ್ಲೇ ಲೋಪಗಳು ಎದ್ದು ಕಾಣುತ್ತವೆ. ಆದ್ರೆ ಫಾರ್ ದಿ ಫಸ್ಟ್ ಟೈಂ, ಕಾಂತಾರ ಸಿನಿಮಾಗಾಗಿ ರಿಷಬ್ ಶೆಟ್ಟಿ ಅಂಡ್ ಟೀಂ ಎಲ್ಲೂ ತಪ್ಪುಗಳು ಸಿಗದಂತೆ ಫುಲ್ ಎಫರ್ಟ್​ ಹಾಕಿದೆ. ಪ್ರಮೋದ್ ಶೆಟ್ಟಿ ಪಾತ್ರ ಕೊಂಚ ಡಮ್ಮಿ ಅನಿಸುತ್ತದೆ. ಅಂತಹ ಅದ್ಭುತ ನಟನಿಗೆ ಮತ್ತಷ್ಟು ಗಟ್ಟಿ ಪಾತ್ರ ನೀಡಬಹುದಿತ್ತು ಅನ್ನೋದನ್ನ ಬಿಟ್ಟರೆ ಎಲ್ಲಾ ಅಚ್ಚುಕಟ್ಟಾಗಿದೆ.

ಕಾಂತಾರ ಫೈನಲ್ ಸ್ಟೇಟ್​ಮೆಂಟ್

ಕರಾವಳಿಗೆ ಮಾತ್ರ ಸೀಮಿತವಾಗಿದ್ದ ಅಲ್ಲಿನ ಆಚಾರ, ವಿಚಾರ, ನಂಬಿಕೆಗಳನ್ನ ಕರುನಾಡು ಸೇರಿದಂತೆ ಇಡೀ ವಿಶ್ವಕ್ಕೆ ಪರಿಚಯಿಸಿದ್ದಾರೆ ರಿಷಬ್. ಚಿತ್ರದ ಕಥೆ, ಪಾತ್ರಗಳು, ದೈವಾರಾಧನೆ, ಕಾಮಿಡಿ, ಎಮೋಷನ್ಸ್, ಲವ್, ಆ್ಯಕ್ಷನ್​ ಹೀಗೆ ಎಲ್ಲವೂ ಮಸ್ತ್ ಮನರಂಜನೆ ಕೊಡಲಿವೆ. ಎಲ್ಲಕ್ಕಿಂತ ಹೆಚ್ಚಾಗಿ ಹೊಂಬಾಳೆ ಫಿಲಂಸ್​ನ ವಿಜಯ್ ಕಿರಗಂದೂರು, ಕೆಜಿಎಫ್ ನಂತ್ರ ಇಂತಹ ಕಂಟೆಂಟ್ ಬೇಸ್ಡ್ ಸಿನಿಮಾನ ನಿರ್ಮಿಸಿರೋದು ಇಂಟರೆಸ್ಟಿಂಗ್. ರಿಷಬ್ ಕನಸುಗಳಿಗೆ ರೆಕ್ಕೆ ಕಟ್ಟಿ, ಕನ್ನಡದ ಭಾವುಟವನ್ನು ಮತ್ತಷ್ಟು ಮುಗಿಲಿಗೆ ಏರಿಸಲಾಗಿದೆ.

ಒಟ್ಟಿನಲ್ಲಿ ಈ ಚಿತ್ರದಿಂದ ರಿಷಬ್ ಶೆಟ್ಟಿಗೆ ಸ್ಟೇಟ್ ಅವಾರ್ಡ್​ ಕಟ್ಟಿಟ್ಟ ಬುತ್ತಿ ಎನ್ನಲಾಗ್ತಿದ್ದು, ನ್ಯಾಷನಲ್ ಅವಾರ್ಡ್ಸ್ ಬಂದ್ರೂ ಅಚ್ಚರಿಯಿಲ್ಲ. ಇದು ನಮ್ಮ ಕರುನಾಡ ದಂತಕಥೆ ಆಗಿದ್ದು, ಪ್ರತಿಯೊಬ್ಬರೂ ಥಿಯೇಟರ್​ನಲ್ಲಿ ನೋಡಲೇಬೇಕಾದ ಸಿನಿಮಾ ಆಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES