Monday, December 23, 2024

ಸಾರ್ವಜನಿಕರಿಗಾಗಿ ಆಸ್ಪತ್ರೆ ಕಟ್ಟಿಸಿರುವ ಲೀಲಾವತಿ ಅವ್ರ ಮನಸ್ಸು ದೊಡ್ಡದು.!

ಬೆಂಗಳೂರು: ಲೀಲಾವತಿ ಅವರ ಅಭಿನಯದ ಸಿನಿಮಾಗಳನ್ನು ನೋಡಿದರೆ, ಅವರಿಗೆ ಸರಿಸಾಟಿ ಯಾರೂ ಇಲ್ಲ. ಅವರ ನಟನೆ ಮನೋಜ್ಞವಾದುದು. ಯಾವ ಪಾತ್ರವಾದರೂ ಪರಕಾಯಪ್ರವೇಶ ಮಾಡಿ ಕನ್ನಡ ಚಿತ್ರರಂಗಕ್ಕೆ ಶ್ರೀಮಂತಿಕೆ ನೀಡಿರುವ ಮೇರು ಕಲಾವಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಇಂದು ನೆಲಮಂಗಲ ತಾಲ್ಲೂಕಿನ ಸೋಲದೇವನಹಳ್ಳಿಯಲ್ಲಿ ಹಿರಿಯ ನಟಿ ಲೀಲಾವತಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ, ನೆಲಮಂಗಲದಲ್ಲಿ ಎಷ್ಟು ಜನ ಶ್ರೀಮಂತರಿರಬಹುದು, ಆದರೆ ಯಾರೂ ಆಸ್ಪತ್ರೆ, ಶಾಲೆ ಕಟ್ಟಿಸಬೇಕೆಂದು ವಿಚಾರ ಮಾಡಿರಲಿಲ್ಲ. ತಾಯಿ ಲೀಲಾವತಿಯವರು ಇದನ್ನು ಕಟ್ಟಿಸಿ ಅವರ ಹೃದಯ ಶ್ರೀಮಂತಿಕೆ ತೋರುವುದರ ಜೊತೆಗೆ ನಾವೆಲ್ಲಾ ಎಷ್ಟು ಸಣ್ಣವರೆಂದೂ ತೋರಿಸಿದ್ದಾರೆ.

ಆಸ್ಪತ್ರೆಯಲ್ಲಿ ಬಡವರಿಗೆ, ಬಡ ಮಕ್ಕಳಿಗೆ ಚಿಕಿತ್ಸೆ ಸಿಗಬೇಕು ಎಂದು ಸರ್ಕಾರಗಳು ಮಾಡಬೇಕಿರುವ ಕೆಲಸ ಲೀಲಾವತಿ ಅವರು ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ನಾನು ಬರದೇ ಹೋದರೆ ನನ್ನ ಕರ್ತವ್ಯಕ್ಕೆ ಚ್ಯುತಿಯಾಗುತ್ತಿತ್ತು. ಈ ಆಸ್ಪತ್ರೆ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಪರಿವರ್ತನೆಯಾಗಬೇಕು. ಅದನ್ನು ಖಂಡಿತವಾಗಿ ಮಾಡುವುದಲ್ಲದೆ, ವೈದ್ಯರ ನೇಮಕಾತಿ ಮುಂತಾದ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಸಿಎಂ ಈ ಭರವಸೆ ನೀಡಿದರು.

ಲೀಲಾವತಿ ಅವರು ಅಭಿನಯಿಸಿರುವ ಚಿತ್ರಗಳನ್ನೂ ನೋಡದೇ ಇರುವವರು ರಾಜ್ಯದಲ್ಲಿ ಬಹಳ ಕಡಿಮೆ. ಅವರದ್ದು ಅದ್ಭುತವಾದ ಅಭಿನಯ. ಚಲನಚಿತ್ರದಲ್ಲಿ ಬಹಳ ದಿನ ತಾರೆಯಾಗಿ ಉಳಿಯುವುದು ಕಷ್ಟ. ಆದರೆ ನಿರಂತರವಾಗಿ ಹಲವಾರು ಸವಾಲುಗಳನ್ನು ಎದುರಿಸಿ, ಅಷ್ಟೇ ಸಮಾಧಾನದಿಂದ ಎಲ್ಲರ ಲೇಸು ಬಯಸುವ ದೊಡ್ಡ ಗುಣ ಹೊಂದಿರುವ ಲೀಲಾವತಿಯವರು ಸೋಲದೇವನಹಳ್ಳಿಯಲ್ಲಿ ನೆಲೆಸಿರುವುದು ದೇವರೇ ಅವನ ಪರವಾಗಿ ಕಳುಹಿಸಿಕೊಟ್ಟಂತಿದೆ ಎಂದು ಸಿಎಂ ಹೊಗಳಿದರು.

RELATED ARTICLES

Related Articles

TRENDING ARTICLES