ಕಲಬುರಗಿ : ಮಹಾರಾಷ್ಟ್ರದ ಗಡಿ ಗ್ರಾಮದ ಬಳಿ ಕಲಬುರಗಿ ಜಿಲ್ಲೆ ಪೊಲೀಸರ ಮೇಲೆ ಗಾಂಜಾ ದಂಧೆಕೋರರು ಮಾರಣಾಂತಿಕ ಹಲ್ಲೆ ಮಾಡಿದ ಪ್ರಕರಣ ಇಡೀ ರಾಜ್ಯವನ್ನೇ ಅಕ್ಷರಶಃ ಬೆಚ್ಚಿ ಬೀಳಿಸಿದೆ. ಮಹಾರಾಷ್ಟ್ರದ ಉಮರ್ಗಾ ತಾಲೂಕಿನ ತುರೂರಿ ಬಳಿ ತೆರಳಿದ್ದಾಗ 40 ಜನ ಗಾಂಜಾ ದಂಧೆಕೋರರಿಂದ ಹಲ್ಲೆಗೊಳಗಾಗಿದ್ದ ಸಿಪಿಐ ಶ್ರೀಮಂತ್ ಇಲ್ಲಾಳ್ ಜೀವನ್ಮರಣದ ಮಧ್ಯೆ ಹೋರಾಟ ಮಾಡ್ತಿದ್ದು, ಕೊಂಚಮಟ್ಟಿಗೂ ಸುಧಾರಣೆ ಕಂಡಿಲ್ಲ. ಹೀಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಲು ಚಿಂತಿಸಲಾಗಿದೆ. ಈ ಸಂಬಂಧ ಕಲಬುರಗಿ ಯುನೈಟೆಡ್ ಆಸ್ಪತ್ರೆ ವೈದ್ಯರು, ಮಣಿಪಾಲ್ ಆಸ್ಪತ್ರೆ ವೈದ್ಯರು ಹಾಗೂ ಏರ್ ಆ್ಯಂಬುಲೆನ್ಸ್ ವೈದ್ಯರೊಂದಿಗೆ ಚರ್ಚಿಸಲಾಗ್ತಿದೆ ಅಂತಾ SP ಇಶಾ ಪಂತ್ ಹೇಳಿದ್ದಾರೆ.
ಇನ್ನೂ ಸಿಪಿಐ ಶ್ರೀಮಂತ್ ಇಲ್ಲಾಳ್ ಮೇಲೆ ಹಲ್ಲೆ ನಡೆಸಿ ಅವರ ಸರ್ವಿಸ್ ರಿವಾಲ್ವರ್, ನಗದು, ಉಂಗುರ, ಚೈನ್ ಸಹ ಗಾಂಜಾ ದಂಧೆಕೋರರು ದರೋಡೆ ಮಾಡಿ ಹೋಗಿದ್ದಾರೆ. ಇನ್ನೂ ಪ್ರಕರಣ ಸಂಬಂಧ ಬೀದರ್ ಜಿಲ್ಲೆ ಮಂಠಾಳ ಪೊಲೀಸ್ ಠಾಣೆಯಲ್ಲಿ ಒಟ್ಟು 40 ಹಲ್ಲೆಕೋರರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಈವರೆಗೆ 11 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಶೀಘ್ರವೇ ಎಲ್ಲಾ ಆರೋಪಿಗಳನ್ನು ಬಂಧಿಸುವುದಾಗಿ SP ಹೇಳಿದ್ದು, ಸದ್ಯ ಬೀದರ್, ಕಲಬುರಗಿ ಹಾಗೂ ಉಮರ್ಗಾ ಪೊಲೀಸರು ಸ್ಥಳ ಪರಿಶೀಲಿಸಿದ್ದಾರೆ. ಏತನ್ಮಧ್ಯೆ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಸಹ ಆಸ್ಪತ್ರೆಗೆ ಭೇಟಿ ನೀಡಿ ಸಿಪಿಐ ಆರೋಗ್ಯ ಪರಿಶೀಲಿಸಿದ್ದು, ಸರ್ಕಾರ ಎಲ್ಲಾ ಅಗತ್ಯ ನೆರವು ನೀಡಲಿದೆ ಅಂತಾ ಹೇಳಿದ್ರು.
ಅದೇನೇ ಇರಲಿ, ಗಾಂಜಾ ಮಾಫಿಯಾಗಳಿಂದ CPI ಶ್ರೀಮಂತ್ ಇಲ್ಲಾಳ್ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಟ ಮಾಡುತ್ತಿದ್ದು, ಸರ್ಕಾರ ಇನ್ನಾದರೂ ಗಾಂಜಾ ಮಾಫಿಯವನ್ನು ಬೇರು ಸಮೇತ ಕಿತ್ತು ಹಾಕಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
ಅನಿಲ್‌ಸ್ವಾಮಿ, ಪವರ್ ಟಿವಿ, ಕಲಬುರಗಿ