ಪ್ರತಿ ವರ್ಷ ಸೆಪ್ಟೆಂಬರ್ 21ರಂದು ಅಂತಾರಾಷ್ಟ್ರೀಯ ಶಾಂತಿ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ.
ಪ್ರತಿ ವರ್ಷ ಈ ದಿನದಂದು ವಿಶ್ವಸಂಸ್ಥೆಯ ಮಹಾಧಿವೇಶನ ನಡೆಯುವುದು ವಾಡಿಕೆ. ಈ ದಿನದಂದು ಅಹಿಂಸೆ ಮತ್ತು ಕದನ ವಿರಾಮಕ್ಕೆ ಉತ್ತೇಜನ ನೀಡುವ ಮೂಲಕ ವಿವಿಧ ದೇಶಗಳು ಮತ್ತು ಜನರಲ್ಲಿ ಶಾಂತಿಯ ಆದರ್ಶಗಳನ್ನು ಉತ್ತೇಜಿಸಲು ವಿಶ್ವಸಂಸ್ಥೆಯು ಪ್ರಯತ್ನಿಸುತ್ತದೆ. ಈ ವರ್ಷದ ಅಂತಾರಾಷ್ಟ್ರೀಯ ಶಾಂತಿ ದಿನಕ್ಕೆ ‘ವರ್ಣಭೇದ ನೀತಿ ಕೊನೆಗೊಳಿಸಿ, ಶಾಂತಿ ನಿರ್ಮಿಸಿಕೊಳ್ಳಿ’ ಎನ್ನುವ ಆಶಯವನ್ನು ಇರಿಸಿಕೊಳ್ಳಲಾಗಿದೆ. ಕೇವಲ ಹಿಂಸೆಯ ನಿರ್ಮೂಲನೆ ಮಾತ್ರವೇ ಶಾಂತಿಯನ್ನು ಖಾತ್ರಿಪಡಿಸುವುದಿಲ್ಲ.
ಎಲ್ಲರಿಗೂ ಬೆಳೆಯಲು ಸಮಾನ ಅವಕಾಶ ನೀಡುವ ಸಮಾಜಗಳ ನಿರ್ಮಾಣದಿಂದ ಮಾತ್ರವೇ ಶಾಶ್ವತ ಶಾಂತಿ ನೆಲೆಸಲು ಸಾಧ್ಯ ಎಂದು ವಿಶ್ವಸಂಸ್ಥೆ ಹೇಳಿದೆ. ವಿಶ್ವಸಂಸ್ಥೆಯು 1981ರಲ್ಲಿ ಈ ದಿನವನ್ನು ಘೋಷಿಸಿತು. ಮಾನವ ಕುಲವು ಭಿನ್ನತೆಗಳಿಗಿಂತ ಹೆಚ್ಚಾಗಿ ಶಾಂತಿಗೆ ಬದ್ಧರಾಗಲು ಮತ್ತು ಶಾಂತಿಯ ಸಂಸ್ಕೃತಿಯನ್ನು ನಿರ್ಮಿಸಲು ಕೊಡುಗೆ ನೀಡಲು ಜಾಗತಿಕವಾಗಿ ವಿಶ್ವ ಶಾಂತಿಯ ದಿನವನ್ನು ಆಚರಿಸುತ್ತಿದೆ.